×
Ad

ಮಗನ ಶವ ತಂದೆ ಹೊತ್ತುಕೊಂಡು ಹೋಗುವ ಉತ್ತರ ಪ್ರದೇಶದಲ್ಲಿ ದನಗಳಿಗೆ ವಿಶೇಷ ಆಂಬುಲೆನ್ಸ್ ಸೇವೆ ಪ್ರಾರಂಭ

Update: 2017-05-02 16:28 IST

ಲಕ್ನೋ,ಮೇ 2: ರಾಜ್ಯದಲ್ಲಿ ಗೋರಕ್ಷಣೆಗಾಗಿ ಕೈಗೊಳ್ಳಲಾಗಿರುವ ಸರಣಿ ಕ್ರಮಗಳಿಗೆ ಇತ್ತೀಚಿನ ಸೇರ್ಪಡೆಯಾಗಿ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅವರು ದನಗಳಿಗಾಗಿಯೇ ಮೀಸಲಾದ ವಿಶೇಷ ಆ್ಯಂಬುಲನ್ಸ್‌ಗೆ ಸೋಮವಾರ ಹಸಿರು ನಿಶಾನೆ ತೋರಿಸಿದ್ದಾರೆ. ಇದಾದ ಕೆಲವೇ ಗಂಟೆಗಳ ಬಳಿಕ ರಾಜ್ಯದ ಇನ್ನೊಂದು ಭಾಗದಲ್ಲಿರುವ ಇಟಾವಾದಲ್ಲಿ ಆ್ಯಂಬುಲನ್ಸ್ ಕೊರತೆಯಿಂದಾಗಿ ವ್ಯಕ್ತಿಯೋರ್ವ ಆಸ್ಪತ್ರೆಯಿಂದ ತನ್ನ 15 ವರ್ಷ ಪ್ರಾಯದ ಪುತ್ರನ ಶವವನ್ನು ಹೆಗಲ ಮೇಲೆ ಹೊತ್ತೊಯ್ಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ !

 ಅನಾರೋಗ್ಯಪೀಡಿತ ಮತ್ತು ಗಾಯಾಳು ದನಗಳನ್ನು ಗೋಶಾಲೆಗಳಿಗೆ ಮತ್ತು ಪಶು ವೈದ್ಯಕೀಯ ಆಸ್ಪತ್ರೆಗಳಿಗೆ ಸಾಗಿಸಲು ಗೋವಂಶ ಚಿಕಿತ್ಸಾ ಆ್ಯಂಬುಲನ್ಸ್‌ಗಳನ್ನು ಆರಂಭಿಸಲಾಗಿದೆ. ಆರಂಭದಲ್ಲಿ ನರೇಗಾ ಮಝ್ದೂರ್ ಕಲ್ಯಾಣ ಸಂಘಟನೆಯ ಸಹಭಾಗಿತ್ವದೊಡನೆ ಈ ಸೇವೆ ಅಲಹಾಬಾದ್, ಗೋರಖ್‌ಪುರ, ಲಕ್ನೋ, ಮಥುರಾ ಮತ್ತು ವಾರಣಾಸಿಗಳಲ್ಲಿ ಲಭ್ಯವಿರುತ್ತದೆ.ಆದಿತ್ಯನಾಥ ಅವರು ಉ.ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಗೋರಕ್ಷಣೆಗಾಗಿ ವಿಶೆಷ ಕಾಳಜಿ ವಹಿಸಲಾಗುತ್ತಿದೆ. ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿಯಿಂದ ಮೊದಲ್ಗೊಂಡು ಸರಣಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ದನಗಳಿಗಾಗಿ ಆ್ಯಂಬುಲನ್ಸ್ ಸೇವೆ ಹೊಸದೇನಲ್ಲ. 2015ರಲ್ಲಿ ಜಾರ್ಖಂಡ್‌ನಲ್ಲಿ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಉದ್ಯಮಿಯೋರ್ವರು ಇಂತಹ 10 ಆ್ಯಂಬುಲನ್ಸ್‌ಗಳ ಕೊಡುಗೆ ನೀಡಿದ್ದರು.

ಉತ್ತರ ಪ್ರದೇಶದಲ್ಲಿ ವ್ಯಕ್ತಿಯೋರ್ವ ತನ್ನ ಮಗನ ಶವವನ್ನು ಹೆಗಲುಗಳ ಮೇಲೆ ಹೊತ್ತು ಸಾಗಿಸಿದ ಪ್ರಕರಣವು ಜನರ ಆರೋಗ್ಯ ರಕ್ಷಣೆ ವ್ಯವಸ್ಥೆಯ ಬಗ್ಗೆ ಸರಕಾರದ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ. ಇಂತಹ ಹಲವಾರು ಘಟನೆಗಳು ಈ ಹಿಂದೆಯೂ ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News