39 ವರ್ಷದ ಫ್ರಾನ್ಸ್ ಅಧ್ಯಕ್ಷೀಯ ಅಭ್ಯರ್ಥಿ ಮ್ಯಾಕ್ರೊನ್ ಪತ್ನಿ ಬ್ರಿಗಿಟ್ ಗೆ 64 ವರ್ಷ !
►ಫ್ರಾನ್ಸ್ ನ ಅತ್ಯಂತ ಕಿರಿಯ ಅಧ್ಯಕ್ಷನಾಗುವ ಸಾಧ್ಯತೆ
►ತನ್ನ ಶಿಕ್ಷಕಿಯನ್ನೇ ಮದುವೆಯಾದ ವಿದ್ಯಾರ್ಥಿ
►ಪತಿಯ ಪ್ರಚಾರದಲ್ಲಿ ಬ್ರಿಗಿಟ್ ಪ್ರಮುಖ ಪಾತ್ರ
ಪ್ಯಾರಿಸ್, ಮೇ 2: ಇತ್ತೀಚೆಗೆ ನಡೆದ ಫ್ರಾನ್ಸ್‌ನ ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನಲ್ಲಿ ಮತಗಳಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ಇಮಾನುಯೆಲ್ ಮ್ಯಾಕ್ರೋನ್‌ರ ವೈಯಕ್ತಿಕ ಜೀವನವೂ ಆಸಕ್ತಿದಾಯಕವಾಗಿದೆ.
39 ವರ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಪತ್ನಿ 64 ವರ್ಷದ ಬ್ರಿಗಿಟ್. ಆಧುನಿಕ ಫ್ರಾನ್ಸ್‌ನ ಅತ್ಯಂತ ಕಿರಿಯ ಅಧ್ಯಕ್ಷನಾಗಲು ಹೊರಟಿರುವ ಮ್ಯಾಕ್ರೋನ್‌ರ 15ರ ವಯಸ್ಸಿನಿಂದಲೇ ಬ್ರಿಗಿಟ್ ಅವರ ಬದುಕಿನಲ್ಲಿ ಇದ್ದಾರೆ. ಮೊದಲು ಶಿಕ್ಷಕಿಯಾಗಿ, ಬಳಿಕ ಪ್ರೇಯಸಿಯಾಗಿ ಮತ್ತು ಈಗ ಪತ್ನಿಯಾಗಿ ಮತ್ತು ಚುನಾವಣಾ ಪ್ರಚಾರ ನಿರ್ವಾಹಕಿಯಾಗಿ.
ಮೊದಲ ಸುತ್ತಿನ ಚುನಾವಣೆಯಲ್ಲಿ ಮೊದಲ ಸ್ಥಾನ ಗಳಿಸಿದ ಬಳಿಕ, ಬ್ರಿಗಿಟ್‌ರನ್ನು ವೇದಿಕೆಗೆ ಕರೆದುಕೊಂಡು ಬಂದ ಮ್ಯಾಕ್ರೋನ್, ‘‘ಅವರಿಲ್ಲದಿದ್ದರೆ, ನಾನು ನಾನಾಗುತ್ತಿರಲಿಲ್ಲ’’ ಎಂದು ತನ್ನ ಆನಂದತುಂದಿಲ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ತೆಳ್ಳಗಿದ್ದು ಸುಂದರವಾಗಿ ಕಾಣುವ ಹಾಗೂ ನೀಲಿ ಕಣ್ಣುಗಳನ್ನು ಹೊಂದಿರುವ ಬ್ರಿಗಿಟ್, ಮ್ಯಾಕ್ರೋನ್‌ರ ಅತ್ಯಂತ ಆಪ್ತ ಸಲಹಾಕಾರರಾಗಿದ್ದಾರೆ. ಮೇ 7ರಂದು ನಡೆಯಲಿರುವ ಎರಡನೆ ಹಂತದ ಚುನಾವಣೆಯಲ್ಲಿ ತಾನು ವಿಜಯಿಯಾಗಿ ಹೊರಹೊಮ್ಮಿದರೆ, ಅಧ್ಯಕ್ಷೀಯ ಅರಮನೆಯಲ್ಲಿ ಪತ್ನಿಗೊಂದು ಸಲಹಾಕಾರ ಸ್ಥಾನ ನೀಡುವ ವಾಗ್ದಾನವನ್ನು ಅವರು ಈಗಾಗಲೇ ನೀಡಿದ್ದಾರೆ.
‘‘ಪ್ರತಿ ರಾತ್ರಿ ನಾವು ಭೇಟಿಯಾಗಿ ಚರ್ಚಿಸುತ್ತೇವೆ ಹಾಗೂ ಪರಸ್ಪರರ ಬಗ್ಗೆ ನಾವು ಏನು ಕೇಳಿದ್ದೇವೋ ಅದನ್ನು ಮತ್ತೊಮ್ಮೆ ಹೇಳುತ್ತೇವೆ’’ ಎಂಬುದಾಗಿ ಬ್ರಿಗಿಟ್ 2016ರಲ್ಲಿ ‘ಪ್ಯಾರಿಸ್ ಮ್ಯಾಚ್’ ನಿಯತಕಾಲಿಕಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ. ‘‘ನಾನು ಎಲ್ಲದಕ್ಕೂ ಗಮನ ನೀಡಬೇಕಾಗುತ್ತದೆ. ಅವರನ್ನು ನೋಡಿಕೊಳ್ಳಲು ಗರಿಷ್ಠ ಪ್ರಯತ್ನಗಳನ್ನು ಮಾಡುತ್ತೇನೆ’’.
ಮ್ಯಾಕ್ರೋನ್‌ರ ಬದುಕಿನಲ್ಲಿ ಬರುವ ಮೊದಲು ಬ್ರಿಗಿಟ್ ಇನ್ನೊಬ್ಬರ ಹೆಂಡತಿ ಹಾಗೂ ಮೂರು ಮಕ್ಕಳ ತಾಯಿಯಾಗಿದ್ದರು.
1990ರ ದಶಕದಲ್ಲಿ ‘ಜಾಕ್ ಆ್ಯಂಡ್ ಹಿಸ್ ಮಾಸ್ಟರ್’ ಚಿತ್ರದಲ್ಲಿ ನಟಿಸಿದ ಇಮಾನುಯೆಲ್‌ರ ಆಕರ್ಷಣೆಗೆ ಅವರು ಗುರಿಯಾದರು. ಆಗ 39 ವರ್ಷದ ಶಿಕ್ಷಕಿಯಾಗಿದ್ದ ಅವರು ಮ್ಯಾಕ್ರೋನ್‌ರ ಬುದ್ಧಿಮತ್ತೆಗೆ ಮಾರುಹೋದರು.
‘‘17ರ ಹರಯದಲ್ಲಿ ಇಮಾನುಯೆಲ್ ನನಗೆ ಹೇಳಿದರು: ‘ನೀವು ಏನೇ ಮಾಡಿ, ನಾನು ನಿಮ್ಮನ್ನು ಮದುವೆಯಾಗುತ್ತೇನೆ’’ ಎಂದು ಬ್ರಿಗಿಟ್ ಕಳೆದ ವರ್ಷದ ಎಪ್ರಿಲ್‌ನಲ್ಲಿ ‘ಪ್ಯಾರಿಸ್ ಮ್ಯಾಚ್’ ನಿಯತಕಾಲಿಕಕ್ಕೆ ಹೇಳಿದರು.
ಇಮಾನುಯೆಲ್ ಪ್ಯಾರಿಸ್‌ನ ಪ್ರತಿಷ್ಠಿತ ಹೈಸ್ಕೂಲೊಂದರಲ್ಲಿ ಶಿಕ್ಷಣ ಮುಗಿಸಿದರು. ಆಗಲೂ ಬ್ರಿಗಿಟ್‌ರ ಸಂಪರ್ಕದಲ್ಲೇ ಇದ್ದರು ಹಾಗೂ ಬ್ರಿಗಿಟ್ ನಿಧಾನವಾಗಿ ಅವರತ್ತ ಒಲಿಯುತ್ತಿದ್ದರು.
2006ರಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಗಂಡ ಆ್ಯಂಡ್ರಿ ಲೂಯಿಸ್ ಆಶರ್‌ರನ್ನು ಬ್ರಿಗಿಟ್ ತೊರೆದರು ಹಾಗೂ ಒಂದು ವರ್ಷದ ಬಳಿಕ ಮ್ಯಾಕ್ರೋನ್‌ರನ್ನು ಮದುವೆಯಾದರು.
ಮೇ 7ರಂದು ನಡೆಯಲಿರುವ ಚುನಾವಣೆಯಲ್ಲಿ ಮ್ಯಾಕ್ರನ್ ತೀರಾ ಬಲಪಂಥೀಯ ಮರೀನ್ ಲೇ ಪೆನ್‌ರನ್ನು ಎದುರಿಸಲಿದ್ದಾರೆ.
7 ವರ್ಷದ ಮಗುವಿನ ಅಜ್ಜಿ
ಬ್ರಿಗಿಟ್ ಈಗ ಏಳು ವರ್ಷದ ಮಗುವಿನ ಅಜ್ಜಿಯೂ ಹೌದು. ಅವರು ತನ್ನ ಹಿಂದಿನ ಮದುವೆಯಿಂದ ಪಡೆದ ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಲೆ ಟೌಕೆಟ್ ಎಂಬ ಪಟ್ಟಣದಲ್ಲಿ ವಾರಾಂತ್ಯಗಳಲ್ಲಿ ಭೇಟಿಯಾಗುತ್ತಾರೆ. ಅವರ ಮೂವರು ಮಕ್ಕಳು ಇಂಜಿನಿಯರ್, ಹೃದಯ ತಜ್ಞ ಮತ್ತು ವಕೀಲರಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ.