×
Ad

ಮಗನ ಶವವನ್ನು ಹೆಗಲಲ್ಲಿ ಹೊತ್ತು ಸಾಗಿಸಿದ ತಂದೆ

Update: 2017-05-02 17:52 IST

 ಇಟಾವಾ(ಉ.ಪ್ರ),ಮೇ 2: ನೋಡಿದವರ ಕರುಳು ಹಿಂಡುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇಟಾವಾದ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ತನ್ನ 15ರ ಹರೆಯದ ಪುತ್ರನ ಶವವನ್ನು ಹೆಗಲಿನಲ್ಲಿ ಹೊತ್ತುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವ ವೀಡಿಯೊ ಅದು. ಶವವನ್ನು ಸಾಗಿಸಲು ಆತನಿಗೆ ಸ್ಟ್ರೆಚರ್ ಅಥವಾ ಆ್ಯಂಬುಲನ್ಸ್‌ನ್ನು ಒದಗಿಸಲಾಗಿರಲಿಲ್ಲ. ಇದು ಈ ದೇಶದ ಹೆಚ್ಚಿನ ಭಾಗಗಳಲ್ಲಿ ದಿನನಿತ್ಯವೆಂಬಂತೆ ನಡೆಯುತ್ತಿರುವ ಇಂತಹ ಘಟನೆಗಳ ಪೈಕಿ ಒಂದು...ಅಷ್ಟೇ. ತನ್ನ ಪತ್ನಿಯ ಶವವನ್ನು ಭುಜದ ಮೇಲೆ ಹೊತ್ತುಕೊಂಡು 10 ಮೀ.ದೂರ ನಡೆದಿದ್ದ ಒಡಿಶಾದ ದಾನಾ ಮಜ್ಹಿಯ ಕಥೆ ಇದಕ್ಕೊಂದು ಅಂತ್ಯವೇ ಇಲ್ಲವೇನೋ ಎಂಬಂತೆ ಪುನರಾವರ್ತನೆ ಯಾಗುತ್ತಲೇ ಇದೆ.
ಇಟಾವಾ ಸಮೀಪದ ಗ್ರಾಮದ ನಿವಾಸಿಯಾಗಿರುವ ಕಾರ್ಮಿಕ ಉದಯವೀರ್ (45) ಈ ನತದೃಷ್ಟ ತಂದೆ. ಆಸ್ಪತ್ರೆಯ ವೈದ್ಯರು ತನ್ನ ಮಗ ಪುಷ್ಪೇಂದ್ರನಿಗೆ ಚಿಕಿತ್ಸೆಯನ್ನೇ ನೀಡದೆ ತನ್ನನ್ನು ಹೊರಗೆ ಕಳುಹಿಸಿದ್ದರು ಎಂದು ಆತ ದೂರಿಕೊಂಡಿದ್ದಾನೆ. ಇಟಾವಾದ ಈ ಆಸ್ಪತ್ರೆ ರಾಜ್ಯದಲ್ಲಿಯ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದಾಗಿದೆ.

‘‘ಹುಡುಗನಲ್ಲಿ ಏನೂ ಉಳಿದುಕೊಂಡಿಲ್ಲ ಎಂದು ಅವರು ಹೇಳಿದರು.ನನ್ನ ಮಗ ಕಾಲುನೋವಿನಿಂದಷ್ಟೇ ನರಳುತ್ತಿದ್ದ. ನನ್ನ ಮಗುವನ್ನು ಒಂದೆರಡು ನಿಮಿಷ ಪರೀಕ್ಷಿಸಿದ ವೈದ್ಯರು ಮನೆಗೆ ವಾಪಸ್ ಒಯ್ಯುವಂತೆ ನನಗೆ ಹೇಳಿದ್ದರು ’’ಎಂದು ಉದಯವೀರ್ ಅಳಲು ತೋಡಿಕೊಂಡ.
 ಈ ಹತಾಶ ತಂದೆ ತನ್ನ ಮಗನಿಗೆ ಚಿಕಿತ್ಸೆ ದೊರೆತು ಗುಣಮುಖನಾಗುತ್ತಾನೆ ಎಂಬ ಆಸೆಯಿಂದ ಏಳು ಕಿ.ಮೀ.ದೂರದ ತನ್ನ ಗ್ರಾಮದಿಂದ ಆಸ್ಪತ್ರೆಗೆ ಎರಡು ಬಾರಿ ಕರೆತಂದಿದ್ದ. ಬಡವರಿಗೆ ಉಚಿತವಾಗಿರುವ ಶವವಾಹಕ ವಾಹನ ಅಥವಾ ಆ್ಯಂಬುಲನ್ಸ್ ಸೇವೆಯನ್ನು ವೈದ್ಯರು ಆತನಿಗೆ ಒದಗಿಸಿರಲಿಲ್ಲ.

ಶ್ವಾಸಕೋಶದ ತೀವ್ರ ಸಮಸ್ಯೆಯಿಂದ ಬಳಲುತ್ತಿರುವ ಉದಯವೀರ್ ಮಗನ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ತುಂಬ ಕಷ್ಟದಿಂದಲೇ ಆಸ್ಪತ್ರೆಯಿಂದ ಹೊರಕ್ಕೆ ಸಾಗಿಸಿದ್ದ. ಬಳಿಕ ಬೈಕೊಂದರಲ್ಲಿ ಶವವನ್ನು ಗ್ರಾಮಕ್ಕೆ ಒಯ್ದಿದ್ದ. ‘‘ನನ್ನ ಮಗನ ಶವವನ್ನು ಮನೆಗೆ ಸಾಗಿಸಲು ವಾಹನ ಸೌಲಭ್ಯವನ್ನು ಪಡೆಯುವುದು ನನ್ನ ಹಕ್ಕು ಎಂದು ಯಾರೂ ಹೇಳಿರಲಿಲ್ಲ ’’ಎಂದು ಆತ ಹೇಳಿದ.

 ಇದೊಂದು ‘ನಾಚಿಕೆಗೇಡು’ ಘಟನೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಬಣ್ಣಿಸಿದರಾದರೂ, ಸೋಮವಾರ ಮಧ್ಯಾಹ್ನ ದಯವೀರ್ ಮಗನನ್ನು ಆಸ್ಪತ್ರೆಗೆ ತಂದಾಗ ಆತ ಅದಾಗಲೇ ಮೃತಪಟ್ಟಿದ್ದ ಎಂದು ಹೇಳಿದರು.

‘‘ವೈದ್ಯರು ಬಸ್ ಅಪಘಾತವೊಂದರ ಗಾಯಾಳುಗಳಿಗೆ ಚಿಕಿತ್ಸೆ ನೀಡುವಲ್ಲಿ ವ್ಯಸ್ತರಾಗಿದ್ದರು, ಹೀಗಾಗಿ ಶವ ಸಾಗಿಸಲು ವಾಹನದ ಅಗತ್ಯವಿದೆಯೇ ಎಂದು ಉದಯವೀರ್‌ಗೆ ಅವರು ಕೇಳಿರಲಿಲ್ಲ ಎಂಬ ಮಾಹಿತಿ ನನಗೆ ಲಭಿಸಿದೆ. ಆದರೆ ಈ ಘಟನೆ ಆಸ್ಪತ್ರೆಯ ವರ್ಚಸ್ಸಿಗೆ ಕಳಂಕ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ತಪ್ಪು ನಮ್ಮದು ಮತ್ತು ಈ ಬಗ್ಗೆ ಖಂಡಿತ ಕ್ರಮವನ್ನು ಕೈಗೊಳ್ಳುತ್ತೇವೆ ’’ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News