ಸಜ್ಜನ್ ರಾಜೀನಾಮೆ ಬೇಡಿಕೆ ತಳ್ಳಿಹಾಕಿದ ಕೆನಡ ಪ್ರಧಾನಿ
ಒಟ್ಟಾವ (ಕೆನಡ), ಮೇ 2: 2006ರಲ್ಲಿ ತಾಲಿಬಾನ್ ವಿರುದ್ಧ ನಡೆದ ಸೇನಾ ಕಾರ್ಯಾಚರಣೆಯ ರೂವಾರಿ ತಾನಾಗಿದ್ದೆ ಎಂಬ ಹೇಳಿಕೆಗೆ ಕೆನಡದ ರಕ್ಷಣಾ ಸಚಿವ ಹರ್ಜಿತ್ ಸಜ್ಜನ್ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಗಳನ್ನು ಆ ದೇಶದ ಪ್ರಧಾನಿ ಜಸ್ಟಿನ್ ಟ್ರೂಡೊ ತಳ್ಳಿ ಹಾಕಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಅಫ್ಘಾನಿಸ್ತಾನದಲ್ಲಿ ನಡೆದ ‘ಆಪರೇಶನ್ ಮೆಡುಸ’ ಕಾರ್ಯಾಚರಣೆ ರೂಪಿಸುವಲ್ಲಿ ತನ್ನ ಪಾತ್ರವನ್ನು ಹಿಗ್ಗಿಸಿ ಹೇಳುವ ಮೂಲಕ ಸಜ್ಜನ್ ‘ಸುಳ್ಳು ಪರಾಕ್ರಮ’ ಮೆರೆದಿದ್ದಾರೆ ಎಂಬುದಾಗಿ ಸೋಮವಾರ ಪ್ರತಿಪಕ್ಷ ಸಂಸದರು ಹೌಸ್ ಆಫ್ ಕಾಮನ್ಸ್‌ನಲ್ಲಿ ಆರೋಪಿಸಿದ್ದರು.
ಸದನದಲ್ಲಿ ಸಜ್ಜನ್ ಮತ್ತೊಮ್ಮೆ ಕ್ಷಮೆ ಯಾಚಿಸಿದ್ದಾರೆ.
‘ಆಪರೇಶನ್ ಮೆಡುಸ’ ಅಫ್ಘಾನಿಸ್ತಾನದಲ್ಲಿ ನಡೆದ ಅತ್ಯಂತ ಭೀಕರ ಯುದ್ಧಗಳ ಪೈಕಿ ಒಂದಾಗಿದೆ.
ಇತರರ ಪರಾಕ್ರಮಗಳನ್ನು ಕದಿಯುವುದನ್ನು ಸೇನಾ ವಲಯಗಳಲ್ಲಿ ‘ಕಾರ್ಡಿನಲ್ ಅಪರಾಧ’ ಎಂಬುದಾಗಿ ಕರೆಯಲಾಗುತ್ತದೆ ಎಂದು ಕನ್ಸರ್ವೇಟಿವ್ ಪಕ್ಷದ ನಾಯಕಿ ರೋನಾ ಆ್ಯಂಬ್ರೋಸ್ ಹೇಳಿದರು.
ಆದಾಗ್ಯೂ, ಈ ವಿಷಯದ ಬಗ್ಗೆ ಟ್ರೂಡೊ ತಲೆಕೆಡಿಸಿಕೊಂಡಿಲ್ಲ.
‘‘ಸಚಿವರು ತಪ್ಪು ಮಾಡಿದ್ದಾರೆ. ಅವರು ಅದಕ್ಕೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ ಹಾಗೂ ಅದಕ್ಕಾಗಿ ಕ್ಷಮೆ ಕೋರಿದ್ದಾರೆ. ಓರ್ವ ತಪ್ಪು ಮಾಡಿದಾಗ ಕೆನಡಿಯನ್ನರು ಆತನಿಂದ ನಿರೀಕ್ಷಿಸುವುದು ಇದನ್ನು’’ ಎಂದು ಟ್ರೂಡೊ ಹೇಳಿರುವುದಾಗಿ ‘ದ ಟೊರಾಂಟೊ ಸನ್’ ವರದಿ ಮಾಡಿದೆ.