ಶೀಘ್ರದಲ್ಲೇ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಕಾಯ್ದೆ ಜಾರಿ: ನಾಯ್ಡು
ಬೆಂಗಳೂರು, ಮೇ.2: ಕೇಂದ್ರ ಸರಕಾರದ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ಶೀಘ್ರದಲ್ಲಿಯೇ ರಾಜ್ಯದಲ್ಲೂ ಜಾರಿಯಾಗಲಿದೆ ಎಂದು ಕೇಂದ್ರನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಇಂದಿಲ್ಲಿ ಹೇಳಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ, ಕೇಂದ್ರ ಯೋಜನೆಗಳಾದ ಸ್ಮಾರ್ಟ್ ಸಿಟಿ ಯೋಜನೆ, ಅಮೃತ್ ಯೋಜನೆ, ಸ್ವಚ್ಛ ಭಾರತ್ ಹಾಗೂ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಈಗಾಗಲೇ ಈ ಕಾಯ್ದೆಯನ್ನು 14 ರಾಜ್ಯಗಳಲ್ಲಿ ಅನುಷ್ಠಾನ ಮಾಡಲಾಗಿದ್ದು, ಕೆಲವು ಕರಡುಗಳನ್ನು ಸಿದ್ಧಪಡಿಸಬೇಕಾಗಿರುವ ರಾಜ್ಯ ಸರಕಾರ 15 ದಿನಗಳ ಕಾಲಾವಕಾಶ ಕೇಳಿದೆ. ಶೀಘ್ರದಲ್ಲಿಯೇ ಕರ್ನಾಟಕದಲ್ಲಿ ಇದು ಜಾರಿಯಾಗಲಿದೆ. ಅಲ್ಲದೆ, ಕಟ್ಟಡ ನಿರ್ಮಾಣ ಸಂಸ್ಥೆಗಳು ಯಾವ ಸೌಲಭ್ಯವನ್ನು ಕೊಡುವುದಾಗಿ ಹೇಳುತ್ತಾರೊ, ಅದು ಗ್ರಾಹಕನಿಗೆ ನೀಡಲೇಬೇಕು. ಸೌಲಭ್ಯ ನೀಡದಿದ್ದರೆ ಅಂತಹ ಕಟ್ಟಡ ನಿರ್ಮಾಣ ಸಂಸ್ಥೆಗಳ ವಿರುದ್ಧ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಬಣ್ಣ ಬಣ್ಣದ ದೊಡ್ಡ ದೊಡ್ಡ ಜಾಹೀರಾತುಗಳನ್ನು ನೀಡಿ ಜನರಿಗೆ ವಂಚಿಸುವ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಕಡಿವಾಣ ಹಾಕಲು ಹಾಗೂ ಗುಣಮಟ್ಟದ ಉದ್ಯಮಕ್ಕೆ ಬೆಂಬಲ ನೀಡುವ ಉದ್ದೇಶದಿಂದಾಗಿ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯನ್ನು ಕೇಂದ್ರ ಸರಕಾರ ತಂದಿದೆ ಎಂದ ಅವರು, ಈ ಕಾಯ್ದೆ ಜಾರಿಯಿಂದ ಗ್ರಾಹಕನೆ ಯಜಮಾನ ಆಗಲಿದ್ದಾನೆ ಎಂದು ಬಣ್ಣಿಸಿದರು.
ಈ ಕಾಯ್ದೆಯಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಏನೋ ಆಗಲಿದೆ ಎಂದು ಭಾವಿಸುವ ಅಗತ್ಯವಿಲ್ಲ. ಜನರನ್ನು ವಂಚಿಸುವ ಸೌಲಭ್ಯ ಕೊಡದ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ತೊಂದರೆಯಾಗಲಿದೆ. ಸರಿಯಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ಯಾವುದೇ ತೊಂದರೆ ಇಲ್ಲ. ಉತ್ತಮವಾಗಿ ಜನರಿಗೆ ಸೌಲಭ್ಯ ನೀಡಿದರೆ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ವೆಂಕಯ್ಯನಾಯ್ಡು ನುಡಿದರು.
ಸ್ಮಾರ್ಟ್ ಸಿಟಿ: ಬೆಂಗಳೂರು ಮುಂದಿನ ಹಂತದಲ್ಲಿ ಸ್ಮಾರ್ಟ್ ಸಿಟಿ ಆಗುವ ಸಾಧ್ಯತೆ ಇದೆ ಎಂದ ಅವರು, ಈಗಾಗಲೇ ರಾಜ್ಯದ ತುಮಕೂರು, ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಉಡುಪಿ ಈ 6 ನಗರಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿವೆ ಎಂದು ಮಾಹಿತಿ ನೀಡಿದರು.
ಆರ್ಥಿಕ ನೆರವು: ಪರಿಶೀಲನಾ ಸಭೆ ಬಳಿಕ ಕೇಂದ್ರ ಸಚಿವ ವೆಂಕಯ್ಯನಾಯ್ಡು, ರಾಜ್ಯದ ವಸತಿ, ನಗರಾಭಿವೃದ್ಧಿ ಹಾಗೂ ಸ್ಥಳೀಯ ಆಡಳಿತ ಉತ್ತೇಜಿಸಲು ಒಟ್ಟು 677 ಕೋಟಿ ರೂ.ಹಣವನ್ನು ಬಿಡುಗಡೆ ಮಾಡಿದರು. ಇದೇ ವೇಳೆ ಸಚಿವರಾದ ರೋಶನ್‌ಬೇಗ್, ಎಂ.ಕೃಷ್ಣಪ್ಪ, ಈಶ್ವರಖಂಡ್ರೆ, ಕೆ.ಜೆ.ಜಾರ್ಜ್ ಅವರಿಗೆ ಹಣದ ಚೆಕ್ ಹಸ್ತಾಂತರಿಸಿದರು.
ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಕೇಂದ್ರ ಸರಕಾರದ ಅಧಿಕಾರಿಗಳು ರಾಜ್ಯಗಳಿಗೆ ಖುದ್ದು ಭೇಟಿ ನೀಡಬೇಕೆಂದ ಅವರು, ಸ್ವತಃ ನಾನೆ ಭೇಟಿ ನೀಡಲಿದ್ದೇನೆ. ಇದರಿಂದ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗುತ್ತದೆ. ಅದೇರೀತಿ, 2020ರೊಳಗೆ ಎಲ್ಲರಿಗೂ ಸೂರು ಒದಗಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ ಎಂದು ಹೇಳಿದರು.
ಮೆಟ್ರೋ ಸಂಪೂರ್ಣ: ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿಗಳು ಸಂಪೂರ್ಣಗೊಂಡಿದ್ದು, ಚಿಕ್ಕಪೇಟೆ ನಿಲ್ದಾಣದ ಕೊನೆಯ ಹಂತದ ಕಾಮಗಾರಿಗಳು ಮಾತ್ರ ಬಾಕಿ ಇದೆ. ಮೇ ತಿಂಗಳ 12 ರಂದು ಕೊನೆಯ ಸುರಕ್ಷತಾ ಪರೀಕ್ಷೆಗಳು ನಡೆಯಲಿದ್ದು, ನಂತರ ಮೆಟ್ರೋ ಕಾರ್ಯಾರಂಭದ ದಿನಾಂಕವನ್ನು ಪ್ರಕಟಿಸುವುದಾಗಿ ಮಾಹಿತಿ ನೀಡಿದರು.