ಇಬ್ಬರ ಬದಲು ಎಷ್ಟು ಜೀವಗಳು, ಮಿ.ಮೋದಿ...?: ಯೋಧರ ಶಿರಚ್ಛೇದನ ಕುರಿತು ಕಾಂಗ್ರೆಸ್ ದಾಳಿ

Update: 2017-05-02 16:36 GMT

ಹೊಸದಿಲ್ಲಿ,ಮೇ 2: ಪಾಕಿಸ್ತಾನದಿಂದ ಇಬ್ಬರು ಭಾರತೀಯ ಯೋಧರ ಹತ್ಯೆ ಮತ್ತು ಅವರ ಶಿರಚ್ಛೇದನ ಕುರಿತಂತೆ ಸರಕಾರದ ವಿರುದ್ಧ ಮಂಗಳವಾರ ತೀವ್ರ ಟೀಕಾಪ್ರಹಾರ ನಡೆಸಿದ ಕಾಂಗ್ರೆಸ್, ‘‘ಪೂರ್ಣಕಾಲಿಕ ರಕ್ಷಣಾ ಸಚಿವರನ್ನು ’’ನೇಮಿಸುವಲ್ಲಿ ವೈಫಲ್ಯಕ್ಕಾಗಿ ಅದನ್ನು ಕುಟುಕಿತು. ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಮನೋಹರ ಪಾರಿಕ್ಕರ್ ಅವರು ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ವಿತ್ತಸಚಿವ ಅರುಣ್ ಜೇಟ್ಲಿಯವರು ಈ ಹುದ್ದೆಯನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದಾರೆ.

‘‘ನಾವು ಪೂರ್ಣಕಾಲಿಕ ರಕ್ಷಣಾ ಸಚಿವರನ್ನು ಹೊಂದಿದ್ದರೆ ಮಾತ್ರ ಪೂರ್ಣಕಾಲಿಕ ಕಾರ್ಯತಂತ್ರವನ್ನು ಹೊಂದಿರಲು ಸಾಧ್ಯ ’’ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದರು.

 ಪಾಕಿಸ್ತಾನ ಅಥವಾ ಭಯೋತ್ಪಾದನೆಯನ್ನು ಎದುರಿಸಲು ಯಾವುದೇ ನೀತಿ ಅಥವಾ ನಿರ್ದೇಶನವಿಲ್ಲವೆಂದು ಆರೋಪಿಸಿರುವ ಕಾಂಗ್ರೆಸ್, ಸೋಮವಾರದಂತಹ ದಾಳಿಗಳನ್ನು ಎದುರಿಸಲು ಕಾರ್ಯನೀತಿಯನ್ನು ರೂಪಿಸುವಾಗ ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದೆ.

 ಸಿಬಲ್ ಈಗ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿರುವ ಸುಷ್ಮಾ ಸ್ವರಾಜ್ ಅವರು 2013ರಲ್ಲಿ ಜಮ್ಮು -ಕಾಶ್ಮೀರದಲ್ಲಿ ಪಾಕಿಸ್ತಾನಿ ಸೈನಿಕರು ಭಾರತೀಯ ಯೋಧ ಲಾನ್ಸ್ ನಾಯ್ಕ್ ಹೇಮರಾಜ್ ಸಿಂಗ್ ಅವರನ್ನು ಕೊಂದು ಶಿರಚ್ಛೇದನಗೈದಿದ್ದ ಸಂದರ್ಭವನ್ನು ನೆನಪಿಸಿಕೊಂಡರು. ಆಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ‘‘ಹೇಮರಾಜ್ ಶಿರಚ್ಛೇದನವಾಗಿದ್ದಾಗ ಒಂದು ತಲೆಯ ಬದಲಾಗಿ 10 ತಲೆಗಳು ನಾವು ಬಲಿ ಪಡೆಯುತ್ತೇವೆ ಎಂದು ಸುಷ್ಮಾ ಹೇಳಿದ್ದರು. ಈಗ ಈ ಇಬ್ಬರ ಬದಲು ಎಷ್ಟು ತಲೆಗಳು ಎಂದು ಪ್ರಧಾನಿಯವರನ್ನು ಕೇಳಲು ನಾನು ಬಯಸಿದ್ದೇನೆ ಎಂದು ಸಿಬಲ್ ಹೇಳಿದರು.

 ತನ್ನ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಇಂತಹ ಒಂದು ಘಟನೆ ಮಾತ್ರ ನಡೆದಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಮೂರುಬಾರಿ ನಡೆದಿದೆ ಎಂದು ಹೇಳಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಎ.ಕೆ.ಆ್ಯಂಥನಿ ಅವರು, ಇಂತಹ ವಿಷಯವನ್ನು ತನ್ನದೇ ಆದ ರೀತಿಯಲ್ಲಿ ನಿರ್ವಹಿಸಲು ಸೇನೆಗೆ ಮುಕ್ತ ಅಧಿಕಾರವನ್ನು ಸರಕಾರವು ನೀಡಬೇಕು ಎಂದರು.

ಸರಕಾರವು ಅವೇ ಹಳಸಲು ಮಾತುಗಳನ್ನಾಡುವುದನ್ನು ಬಿಡಬೇಕು ಮತ್ತು ಪಾಕಿಸ್ತಾನವನ್ನು ಉತ್ತರದಾಯಿಯನ್ನಾಗಿಸಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News