ಆ್ಯಪಲ್‌ನಲ್ಲಿ ರಾಶಿಬಿದ್ದಿರುವ ಅಗಾಧ ನಗದು : ಹಣ ಏನು ಮಾಡಬೇಕೆಂದೇ ಗೊತ್ತಿಲ್ಲ ದೈತ್ಯ ಕಂಪೆನಿಗೆ!
ವಾಶಿಂಗ್ಟನ್, ಮೇ 3: ಅಮೆರಿಕದ ವಾಣಿಜ್ಯ ದೈತ್ಯ ‘ಆ್ಯಪಲ್’ ಯಶಸ್ಸಿನ ತುತ್ತತುದಿಯಲ್ಲಿದೆ. ಸದ್ಯಕ್ಕೆ ಅದು ಹೊಂದಿರುವ ನಗದು ಸಂಗ್ರಹ 256.8 ಬಿಲಿಯ ಡಾಲರ್ (ಸುಮಾರು 16,47,472 ಕೋಟಿ ರೂಪಾಯಿ).ಇಷ್ಟೊಂದು ಬೃಹತ್ ಮೊತ್ತವನ್ನು ಏನು ಮಾಡಬೇಕೆಂಬ ಬಗ್ಗೆ ಕಂಪೆನಿ ಗೊಂದಲದಲ್ಲಿದೆ.
ಮಂಗಳವಾರ ಪ್ರಕಟಗೊಂಡ ಆ್ಯಪಲ್‌ನ ತ್ರೈಮಾಸಿಕ ವರದಿಯು ಕಂಪೆನಿಯ ನಗದು ಸಂಗ್ರಹ ಭಾರೀ ಪ್ರಮಾಣದಲ್ಲಿ ವೃದ್ಧಿಯಾಗಿರುವುದನ್ನು ತೋರಿಸಿದೆ. ಇದು ಇಡೀ ಚಿಲಿ ದೇಶದ ವಾಣಿಜ್ಯಿಕ ಲಾಭದಷ್ಟಿದೆ.
ಈ ಪೆಕಿ ಹೆಚ್ಚಿನ ಹಣ ವಿದೇಶಗಳಲ್ಲಿದೆ. ಆದರೆ, ಆ ಹಣವನ್ನು ಅಮೆರಿಕಕ್ಕೆ ತರುವ ಚಿಂತನೆಗೆ ಕಂಪೆನಿ ವಿರುದ್ಧವಾಗಿದೆ. ಅಮೆರಿಕದ ತೆರಿಗೆ ವ್ಯವಸ್ಥೆಯಲ್ಲಿರುವ ಲೋಪವೇ ಇದಕ್ಕೆ ಕಾರಣ.
ನಗದು ಹಣ ವಿದೇಶಗಳಲ್ಲಿರುವಾಗ ಲಾಭಗಳನ್ನು ಮುಂದೂಡಲು ಅಮೆರಿಕದ ತೆರಿಗೆ ನೀತಿ ಅವಕಾಶನೀಡುತ್ತದೆ. ಆದರೆ ಆ ಹಣವನ್ನು ಅಮೆರಿಕಕ್ಕೆ ತರುವಾಗ ಅದರಿಂದ 35 ಶೇಕಡ ಆದಾಯತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.
ಆ್ಯಪಲ್ ಈ ಕಾಲದ ಅತ್ಯಂತ ವೌಲ್ಯಯುತ ಹಾಗೂ ಅತ್ಯಂತ ಲಾಭದಾಯಕ ಕಂಪೆನಿಯಾಗಿದೆ. ಆದರೆ, ಅದು ಎದರಿಸುತ್ತಿರುವ ಸವಾಲೆಂದರೆ ಅದರ ಲಾಭದ ಸಿಂಹಪಾಲು ಐಫೋನ್‌ಗಳಿಂದ ಬರುತ್ತಿದೆ. ಹಾಗೂ ಐಫೋನ್ ಈಗಾಗಲೇ ಸಂತೃಪ್ತ ಸ್ಮಾರ್ಟ್‌ಫೋನ್ ಮಾರುಕಟ್ಟೆಗಳಲ್ಲಿ ದಿನೇ ದಿನೇ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದೆ.
ತನ್ನ ಶೇರುದಾರರಿಗೆ ಡಿವಿಡೆಂಡ್ ನೀಡಲು ಹಾಗೂ ಹೆಚ್ಚಿನ ಶೇರುಗಳನ್ನು ಮರು ಖರೀದಿಸಲು ಆ್ಯಪಲ್ ಈಗಾಗಲೇ ಸುಮಾರು 200 ಬಿಲಿಯ ಡಾಲರ್ (12,83,077 ಕೋಟಿ ರೂಪಾಯಿ) ಮೊತ್ತವನ್ನು ವ್ಯಯಿಸಿದೆ.