ಅಮೆರಿಕ: ದೀರ್ಘ ವ್ಯಾಪ್ತಿಯ ಕ್ಷಿಪಣಿ ಪರೀಕ್ಷೆ
Update: 2017-05-03 21:01 IST
ಪ್ಯಾರಿಸ್, ಮೇ 3: ಅಮೆರಿಕ ಮತ್ತು ಉತ್ತರ ಕೊರಿಯಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಜಗತ್ತಿನಾದ್ಯಂತ ಪರಮಾಣು ಬಾಂಬನ್ನು ಹೊತ್ತೊಯ್ಯಬಲ್ಲ ದೀರ್ಘ ವ್ಯಾಪ್ತಿಯ ಪ್ರಬಲ ಕ್ಷಿಪಣಿಯೊಂದನ್ನು ಅಮೆರಿಕ ಕ್ಯಾಲಿಫೋರ್ನಿಯದಿಂದ ಬುಧವಾರ ಹಾರಿಸಿದೆ.
ಶಸ್ತ್ರರಹಿತ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿ ‘ಮಿನಿಟ್‌ಮನ್ 3’ಯನ್ನು ವ್ಯಾಂಡನ್‌ಬರ್ಗ್ ವಾಯುಪಡೆ ನೆಲೆಯಿಂದ ಮಧ್ಯರಾತ್ರಿ 12:02ಕ್ಕೆ ಹಾರಿಸಲಾಯಿತು ಹಾಗೂ ಅದು 6,760 ಕಿ.ಮೀ. ದೂರದಲ್ಲಿ ಪೆಸಿಫಿಕ್ ಸಮುದ್ರದಲ್ಲಿರುವ ಕ್ವಾಜಾಲೇನ್ ದ್ವೀಪದ ಮೇಲೆ ಅಪ್ಪಳಿಸಿತು ಎಂದು ಏರ್ ಫೋರ್ಸ್ ಗ್ಲೋಬಲ್ ಸ್ಟ್ರೈಕ್ ಕಮಾಂಡ್ ಹೇಳಿದೆ.
ಅಮೆರಿಕದ ಪರಮಾಣು ವಿಭಾಗದ ಶಸ್ತ್ರ ವಿಭಾಗದ ಸಿದ್ಧತೆ ಮತ್ತು ನಿಖರತೆಯನ್ನು ಪರಿಶೀಲಿಸುವುದಕ್ಕಾಗಿ ಪರೀಕ್ಷೆ ನಡೆಸಲಾಗಿದೆ ಎಂದಿದೆ. ಅಮೆರಿಕದಲ್ಲಿ ಇಂಥ 450 ಕ್ಷಿಪಣಿಗಳಿವೆ ಹಾಗೂ ಪ್ರತಿಯೊಂದೂ ಸುಮಾರು 12,875 ಕಿ.ಮೀ. ಹಾರಲು ಸಮರ್ಥವಾಗಿವೆ.