ವಿಶ್ವದ ಅತೀ ಎತ್ತರದ ರೈಲ್ವೇ ಸೇತುವೆ ಎರಡು ವರ್ಷದಲ್ಲಿ ಪೂರ್ಣ

Update: 2017-05-03 16:06 GMT

ಹೊಸದಿಲ್ಲಿ, ಮೇ 3: ಜಮ್ಮು-ಕಾಶ್ಮೀರದ ಚೆನಾಬ್ ನದಿಗೆ ಕಟ್ಟಲಾಗುವ ವಿಶ್ವದ ಅತ್ಯಧಿಕ ಎತ್ತರದ ರೈಲ್ವೇ ಸೇತುವೆ ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಈ ಸೇತುವೆ ಐಫೆಲ್ ಗೋಪುರಕ್ಕಿಂತ 35 ಮೀಟರ್ ಎತ್ತರವಾಗಿದೆ ಎಂದು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
       
  ಕಮಾನು ಆಕಾರದ ಈ ಸೇತುವೆಯನ್ನು 1,100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು 24000 ಟನ್ ಸ್ಟೀಲ್ ಬಳಸಲಾಗುತ್ತಿದೆ. ಸೇತುವೆ ಸಮುದ್ರ ಮಟ್ಟಕ್ಕಿಂತ 359 ಮೀಟರ್ ಎತ್ತರದಲ್ಲಿರುತ್ತದೆ. ಗಂಟೆಗೆ 260 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯ ಹೊಡೆತವನ್ನು ತಾಳಿಕೊಳ್ಳುವ ಸಾಮರ್ಥ್ಯ ಇರುವ , 1.315 ಕಿ.ಮೀ ಉದ್ದದ ಈ ಸೇತುವೆ ಕಾತ್ರ ಪಟ್ಟಣದ ಬಕ್ಕಾಲ್ ಗ್ರಾಮವನ್ನು ಶ್ರೀನಗರದ ಕವೊರಿ ಗ್ರಾಮದೊಡನೆ ಸಂಪರ್ಕಿಸುತ್ತದೆ. ಸೇತುವೆಯಲ್ಲಿ ಅಳವಡಿಸಲಾದ ಸಂವೇದಕ (ಸೆನ್ಸರ್) ಸಾಧನವು ಗಾಳಿಯ ವೇಗ ಗಂಟೆಗೆ 90 ಕಿ.ಮೀ. ಮೀರಿದರೆ ಹಳಿಯಲ್ಲಿರುವ ಸಿಗ್ನಲ್‌ಗಳಿಗೆ ಅಪಾಯದ (ಕೆಂಪು) ಸಂಕೇತ ರವಾನಿಸುತ್ತದೆ. ಆಗ ರೈಲಿನ ಸಂಚಾರವನ್ನು ತಡೆಹಿಡಿಯಲಾಗುತ್ತದೆ. ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ಪ್ರಕರಣ ಹೆಚ್ಚಿರುವ ಕಾರಣ ಈ ಸೇತುವೆಗೆ 63 ಮಿ.ಮೀ. ದಪ್ಪದ ವಿಶೇಷ ಸ್ಫೋಟ ನಿರೋಧ ಸ್ಟೀಲ್ ಬಳಸಲಾಗುತ್ತದೆ. ಯಾವುದೇ ಸ್ಫೋಟಕ್ಕೆ ಜಗ್ಗದ ವಿಶೇಷ ಸ್ತಂಭಗಳನ್ನು ಬಳಸಲಾಗಿದೆ. ಇದಕ್ಕೆ ಬಳಸಲಾಗಿರುವ ತುಕ್ಕು ನಿರೋಧಕ ಲೇಪನ ಕನಿಷ್ಟ 15 ವರ್ಷ ಬಾಳಿಕೆ ಬರುತ್ತದೆ. ಸೇತುವೆಗೆ ಹೊಂದಿಕೊಂಡು ಪ್ರಯಾಣಕರು ಮತ್ತು ಸೈಕಲ್ ಸವಾರರು ಸಂಚರಿಸುವ ಫುಟ್‌ಪಾತ್ ಇರುತ್ತದೆ. ಸೇತುವೆಯ ಸುರಕ್ಷತೆಗಾಗಿ ವಾಯುಕ್ಷೇತ್ರ ಭದ್ರತಾ ವ್ಯವಸ್ಥೆ ಇರಲಿದೆ. ವಿಷಮ ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ಮತ್ತು ರೈಲಿನ ಸುರಕ್ಷತೆಗಾಗಿ ಸೇತುವೆಯಲ್ಲಿ ಅಂತರ್ಜಾಲ ವೀಕ್ಷಣೆ ಮತ್ತು ಎಚ್ಚರಿಕೆ ನೀಡುವ ವ್ಯವಸ್ಥೆ ಅಳವಡಿಸಲಾಗಿದೆ.

 ಸೇತುವೆ ನಿರ್ಮಾಣ ಕಾರ್ಯವು ಕಾಶ್ಮೀರ ರೈಲು ಸಂಪರ್ಕ ಯೋಜನೆಯಲ್ಲಿ ಅತ್ಯಂತ ಸವಾಲಿನ ಭಾಗವಾಗಿದೆ. ಇದೊಂದು ಅದು್ಭತ ಕಾರ್ಯ ಎಂದು ಅಧಿಕಾರಿ ತಿಳಿಸಿದ್ದಾರೆ.

  ಸೇತುವೆಯಲ್ಲಿ ‘ರೋಪ್‌ವೇ’ ವ್ಯವಸ್ಥೆ ಕೂಡಾ ಇರಲಿದ್ದು 2019ರ ವೇಳೆ ಪೂರ್ಣಗೊಳ್ಳಲಿದ್ದು ರಾಜ್ಯದ ಮತ್ತೊಂದು ಆಕರ್ಷಣೀಯ ಪ್ರವಾಸೀ ಕೇಂದ್ರವಾಗಲಿದೆ ಎಂದವರು ತಿಳಿಸಿದ್ದಾರೆ. ಉಧಂಪುರ-ಶ್ರೀನಗರ-ಬಾರಾಮುಲ್ಲಾ ಸಂಪರ್ಕ ರೈಲ್ವೇ ಯೋಜನೆಯ ಭಾಗವಾಗಿರುವ ಕಾತ್ರಾ-ಬನಿಹಾಲ್ ಮಾರ್ಗದ ಪ್ರಮುಖ ಕೊಂಡಿಯಾಗಿದೆ ಈ ಸೇತುವೆ. ಪೂರ್ಣಗೊಂಡ ಬಳಿಕ ಚೀನಾದ ಶುಯಿಬೈ ರೈಲ್ವೇ ಸೇತುವೆ (275 ಮೀಟರ್) ಯ ದಾಖಲೆಯನ್ನು ಮುರಿದು ವಿಶ್ವದ ಅತ್ಯಂತ ಎತ್ತರದ ಸೇತುವೆ ಎಂಬ ದಾಖಲೆ ಬರೆುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News