×
Ad

ನಾವು ಯೋಜನೆಗಳನ್ನು ಕಾರ್ಯಗತಗೊಳಿಸಿದ ಬಳಿಕ ಮಾತನಾಡುತ್ತೇವೆ: ಜ| ಬಿಪಿನ್‌ ರಾವತ್

Update: 2017-05-04 17:38 IST

ಹೊಸದಿಲ್ಲಿ,ಮೇ 4: ಭಾರತೀಯ ಸೇನೆಯು ತನ್ನ ಯೋಜನೆಗಳನ್ನು ಕಾರ್ಯಗತಗೊಳಿಸುವ ಮುನ್ನ ಅವುಗಳನ್ನು ಬಹಿರಂಗಗೊಳಿಸುವುದಿಲ್ಲ ಎಂದು ಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್ ಅವರು ಗುರುವಾರ ಇಲ್ಲಿ ಹೇಳುವ ಮೂಲಕ ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಭಾರತೀಯ ಯೋಧರ ಶಿರಚ್ಛೇದಗೈದ ಪಾಕಿಸ್ತಾನದ ಸೇನೆಯ ಕೃತ್ಯಕ್ಕೆ ಸಂಭಾವ್ಯ ಪ್ರತೀಕಾರದ ಸುಳಿವು ನೀಡಿದರು.

 ಇಲ್ಲಿ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ, ಯೋಧರ ಶಿರಚ್ಛೇದಕ್ಕೆ ಭಾರತವು ಸೂಕ್ತ ಉತ್ತರ ನೀಡಲಿದೆಯೇ ಎಂಬ ಕುರಿತು ಸುದ್ದಿಗಾರರಿಂದ ಸರಣಿಪ್ರಶ್ನೆಗಳನ್ನು ಎದುರಿಸಿದ ರಾವತ್ ನೇರವಾಗಿ ಉತ್ತರ ನೀಡದೇ, ಪಾಕಿಸ್ತಾನದ ಇಂತಹ ಕೃತ್ಯಗಳಿಗೆ ಸಶಸ್ತ್ರ ಪಡೆಗಳು ಪರಿಣಾಮಕಾರಿ ಉತ್ತರ ನೀಡಲಿವೆ ಎಂದು ಹೇಳಿದರು.

ನಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ನಾವು ಮೊದಲೇ ಹೇಳಿಕೊಳ್ಳುವುದಿಲ್ಲ. ಯೋಜನೆ ಕಾರ್ಯಗತಗೊಂಡ ಬಳಿಕ ನಾವು ವಿವರಗಳನ್ನು ಹಂಚಿಕೊಳ್ಳುತ್ತೇವೆ ಎಂದ ಅವರು ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು. ಸುದ್ದಿಗಾರರು ಒತ್ತಾಯಿಸಿದಾಗ, ಇಂತಹ ಕೃತ್ಯಗಳು ನಡೆದಾಗ ನಾವೂ ಪ್ರತಿಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಈ ಬರ್ಬರ ಕೃತ್ಯಕ್ಕೆ ಸೇನೆಯು ತನ್ನದೇ ಆಯ್ಕೆಯ ಸಮಯ ಮತ್ತು ಸ್ಥಳದಲ್ಲಿ ಉತ್ತರಿಸಲಿದೆ ಎಂದು ಸೇನಾ ಸಿಬ್ಬಂದಿಗಳ ಉಪಮುಖ್ಯಸ್ಥ ಶರತ್ ಚಂದ್ ಅವರು ಬುಧವಾರ ಗುಡುಗಿದ್ದರು.

ಇಬ್ಬರು ಯೋಧರ ಬಲಿದಾನ ವ್ಯರ್ಥಗೊಳ್ಳುವುದಿಲ್ಲ ಮತ್ತು ಪಾಕಿಸ್ತಾನಿ ಸೈನಿಕರ ಅಮಾನುಷ ಕೃತ್ಯಕ್ಕೆ ಭಾರತೀಯ ಸಶಸ್ತ್ರ ಪಡೆಗಳು ಸೂಕ್ತರೀತಿಯಲ್ಲಿ ಪ್ರತಿಕ್ರಿಯಿಸಲಿವೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಹೇಳಿದ್ದರು.

ಮೇ 1ರಂದು ಜಮ್ಮು-ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಗಡಿ ಕಾರ್ಯ ಪಡೆಯಿಂದ ಸೇನೆಯ ನಾಯಿಬ್ ಸುಬೇದಾರ್ ಪರಮಜೀತ್ ಸಿಂಗ್ ಮತ್ತು ಬಿಎಸ್‌ಎಫ್ ಕಾನ್‌ಸ್ಟೇಬಲ್ ಪ್ರೇಮ ಸಾಗರ್ ಅವರ ಶಿರಚ್ಛೇದ ಕೃತ್ಯಕ್ಕೆ ಉತ್ತರ ನೀಡಲು ವಿವಿಧ ಆಯ್ಕೆಗಳನ್ನು ಭಾರತೀಯ ಸೇನೆಯು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿದವು.

ಭಾರತವು ಕಳೆದ ವರ್ಷ ಗಡಿಯಾಚೆ ಸರ್ಜಿಕಲ್ ದಾಳಿಯನ್ನು ನಡೆಸಿ ನಾಶಗೊಳಿಸಿದ್ದ ಭಯೋತ್ಪಾದಕ ಶಿಬಿರಗಳು ಮತ್ತೆ ತಲೆಯೆತ್ತಿರುವ ಬಗ್ಗೆ ಪ್ರಶ್ನೆಗೆ ರಾವತ್, ಭಯೋತ್ಪಾದಕ ರು ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ. ಹಿಮ ಕರಗುತ್ತಿದ್ದು, ಬೇಸಿಗೆಯ ತಿಂಗಳುಗಳು ಆರಂಭಗೊಂಡಿವೆ. ಪ್ರತಿ ವರ್ಷದಂತೆ ಈಗ ನುಸುಳುವಿಕೆ ಶುರುವಾಗಲಿದೆ. ಈ ಬಗ್ಗೆ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನುಸುಳುವಿಕೆಯನ್ನು ತಡೆಯಲು ಕಟ್ಟೆಚ್ಚರವನ್ನು ವಹಿಸಲಾಗಿದೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News