ದೇಶದ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ

Update: 2017-05-04 13:02 GMT

 ಹೊಸದಿಲ್ಲಿ, ಮೇ 4: ಕೇಂದ್ರ ಸರಕಾರದ ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ನಡೆಸಲಾದ ಸಮೀಕ್ಷೆಯಲ್ಲಿ ಮಧ್ಯಪ್ರದೇಶದ ಇಂದೋರ್ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಹೆಮ್ಮೆಗೆ ಪಾತ್ರವಾಗಿದ್ದರೆ ಇದೇ ರಾಜ್ಯದ ಭೋಪಾಲ ದ್ವಿತೀಯ ಸ್ಥಾನ ಪಡೆದಿದೆ. ಕಳೆದ ವರ್ಷ ಈ ಹೆಗ್ಗಳಿಕೆ ಪಡೆದಿದ್ದ ಮೈಸೂರು ನಗರ ಈ ಬಾರಿ ಐದನೇ ಸ್ಥಾನಕ್ಕೆ ಕುಸಿದಿದ್ದರೆ ಉತ್ತರ ಪ್ರದೇಶದ ಗೊಂಡ ಪಟ್ಟಣ ಈ ಪಟ್ಟಿಯಲ್ಲಿ ಕಡೆಯ ಸ್ಥಾನ ಗಳಿಸಿದೆ. ದೇಶದ 434 ನಗರಗಳಲ್ಲಿ ಹಮ್ಮಿಕೊಳ್ಳಲಾಗಿರುವ ಸ್ವಚ್ಛ ಭಾರತ ಅಭಿಯಾನದ ದ್ವಿತೀಯ ಸಮೀಕ್ಷೆಯಲ್ಲಿ ಅಗ್ರ 25 ಸ್ಥಾನ ಪಡೆದ ನಗರಗಳ ಪಟ್ಟಿಯನ್ನು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಬಿಡುಗಡೆಗೊಳಿಸಿದರು. ಮಧ್ಯಪ್ರದೇಶ, ಗುಜರಾತ್, ಜಾರ್ಖಂಡ್ ಮತ್ತು ಛತ್ತೀಸ್‌ಗಢ ರಾಜ್ಯಗಳು ಗಮನಾರ್ಹ ಪ್ರಗತಿ ಸಾಧಿಸಿವೆ. ಆದರೆ ದೇಶದಲ್ಲಿ ಅತೀ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಜ್ಯವಾಗಿರುವ ಉತ್ತರಪ್ರದೇಶದ ಸಾಧನೆ ಕಳವಳದ ವಿಷಯವಾಗಿದೆ.ದೊಡ್ಡ ರಾಜ್ಯವಾಗಿರುವ ಕಾರಣ ಸವಾಲೂ ಕೂಡಾ ದೊಡ್ಡದೇ ಆಗಿದೆ. ಶುಕ್ರವಾರ ಉ.ಪ್ರದೇಶಕ್ಕೆ ತೆರಳಿ ಈ ವಿಚಾರದ ಕುರಿತು ಚರ್ಚೆ ನಡೆಸಲಾಗುವುದು ಎಂದು ನಾಯ್ಡು ಈ ಸಂದರ್ಭ ತಿಳಿಸಿದರು.

ಉ.ಪ್ರದೇಶದ 62 ನಗರಗಳಲ್ಲಿ 50 ನಗರಗಳು 300ಕ್ಕಿಂತ ಕೆಳಗಿನ ಸ್ಥಾನ ಗಳಿಸಿದೆ. ಆದರೆ ಪ್ರಧಾನಿ ಮೋದಿಯವರ ಕ್ಷೇತ್ರವಾದ ವಾರಾಣಸಿ ಉತ್ತಮ ಪ್ರಗತಿ ದಾಖಲಿಸಿ 32ನೇ ಸ್ಥಾನಕ್ಕೆ ತಲುಪಿದೆ. 2014ರಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ವಾರಾಣಸಿ 418ನೇ ಸ್ಥಾನ ಪೆದಿತ್ತು (476 ಪಟ್ಟಣಗಳ ಪಟ್ಟಿಯಲ್ಲಿ).

ಗೊಂಡಾ ಪಟ್ಟಣ 434ನೇ ಸ್ಥಾನ, ಮಹಾರಾಷ್ಟ್ರದ ಭುಸಾವಲ್ 433, ಬಿಹಾರದ ಬಗಾಹ 432, ಉ.ಪ್ರದೇಶದ ಹರ್‌ದೋಯಿ 431, ಬಿಹಾರ ಕಟಿಹಾರ್ 430ನೇ ಸ್ಥಾನ ಪಡೆದಿದೆ.

ಜನವರಿ-ಫೆಬ್ರವರಿಯಲ್ಲಿ ಸ್ವಚ್ಛತಾ ಸಮೀಕ್ಷೆ ನಡೆಸಲಾಗಿದ್ದು ಆಂಧ್ರಪ್ರದೇಶದ ವಿಶಾಖಪಟ್ಟಣ ಮೂರನೇ ಸ್ಥಾನ, ಗುಜರಾತ್‌ನ ಸೂರತ್ ನಾಲ್ಕನೇ ಸ್ಥಾನ ಪಡೆದಿದೆ.ಹೊಸದಿಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶವು 7ನೇ ಸ್ಥಾನಕ್ಕೆ ಕುಸಿದಿದೆ(ಕಳೆದ ವರ್ಷ ನಾಲ್ಕನೇ ಸ್ಥಾನ ಪಡೆದಿತ್ತು). ದಿಲ್ಲಿ ಕಂಟೋನ್ಮೆಂಟ್ ಪ್ರದೇಶ 172ನೇ ಸ್ಥಾನ, ಪೂರ್ವ, ದಕ್ಷಿಣ ಮತ್ತು ಉತ್ತರ ನಗರಪಾಲಿಕೆ ಪ್ರದೇಶ ಕ್ರಮವಾಗಿ 196, 202, 279ನೇ ಸ್ಥಾನ ಗಳಿಸಿದೆ.

 ತ್ಯಾಜ್ಯ ಸಂಗ್ರಹ, ಘನ ತ್ಯಾಜ್ಯ ನಿರ್ವಹಣೆ, ಶೌಚಾಲಯ ನಿರ್ಮಾಣ, ನೈರ್ಮಲ್ಯ ಯೋಜನೆಗಳು ಮತ್ತು ನಡವಳಿಕೆ ಬದಲಿಸುವ ಸಂಪರ್ಕ ವ್ಯವಸ್ಥೆ- ಈ ಐದು ಮಾನದಂಡಗಳ ಆಧಾರದಲ್ಲಿ ನಗರಗಳ ವೌಲ್ಯಮಾಪನ ನಡೆಸಲಾಗುತ್ತದೆ. ಸುಮಾರು 3.7 ಮಿಲಿಯ ನಾಗರಿಕರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

    ಸಮೀಕ್ಷೆಯ ಅಂಗವಾಗಿ ಜನರಿಗೆ ಹಲವು ಪ್ರಶ್ನೆಗಳನ್ನು ನೀಡಿ ಉತ್ತರ ಆಹ್ವಾನಿಸಲಾಗಿತ್ತು. ಕಳೆದೆರಡು ವರ್ಷಗಳಲ್ಲಿ ತಮ್ಮ ನಗರಗಳಲ್ಲಿ ಸ್ಚಚ್ಛತೆ ಸುಧಾರಣೆಯಾಗಿದೆ ಎಂದು ಶೇ.80ರಷ್ಟು ಜನ ಅಭಿಪ್ರಾಯ ಸೂಚಿಸಿರುವುದಾಗಿ ಸರಕಾರ ತಿಳಿಸಿದೆ. ನೈರ್ಮಲ್ಯ ಮತ್ತು ಸ್ವಚ್ಛತೆಯ ಬಗ್ಗೆ ತಾವು ಕೈಗೊಂಡ ಕ್ರಮಗಳ ಕುರಿತು ಸ್ಥಳೀಯ ಸಂಸ್ಥೆಗಳು ಸಲ್ಲಿಸಿದ ದತ್ತಾಂಶ ಮಾಹಿತಿ ಮತ್ತು ಜನರ ಮರುಮಾಹಿತಿ ಆಧಾರದಲ್ಲಿ ಅಂಕಗಳನ್ನು ನಿರ್ಧರಿಸಲಾಗಿದೆ. ಮಹಾತ್ಮಾ ಗಾಂಧೀಜಿಯವರ 150ನೆ ಜನ್ಮದಿನಾಚರಣೆ ವರ್ಷವಾಗಿರುವ 2019ರ ವೇಳೆಗೆ ‘ಸ್ವಚ್ಛ ಭಾರತ’ ಗುರಿ ಮುಟ್ಟಬೇಕು ಎಂಬ ಕೇಂದ್ರ ಸರಕಾರದ ಅಭಿಯಾನದ ಅಂಗವಾಗಿ ಈ ಸಮೀಕ್ಷೆ ನಡೆಸಲಾಗುತ್ತಿದೆ.

  ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ 434 ನಗರಗಳನ್ನು ಈ ಬಾರಿ ಸಮೀಕ್ಷೆಗೆ ಒಳಪಡಿಸಲಾಗಿದೆ. 2016ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಂದು ಮಿಲಿಯನ್‌ಗೂ ಅಧಿಕ ಜನಸಂಖ್ಯೆ ಹೊಂದಿರುವ 73 ನಗರಗಳನ್ನು ಮತ್ತು 2014ರ ಸಮೀಕ್ಷೆಯಲ್ಲಿ 1 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ 476 ನಗರಗಳ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News