ದುಬಾರಿ ವೆಚ್ಚದ ಸೆಕ್ಯೂರಿಟಿ ಸೇವೆ ಆರೋಪದಲ್ಲಿ ಮಾಜಿ ಆರೋಗ್ಯ ಕಾರ್ಯದರ್ಶಿ ವಿರುದ್ಧ ತನಿಖೆ

Update: 2017-05-04 14:27 GMT

ಹೊಸದಿಲ್ಲಿ,ಮೇ 4: ಆರೋಗ್ಯ ಕಾರ್ಯದರ್ಶಿ ಮಧುಪ್ ವ್ಯಾಸ್ ಅವರ ಕಚೇರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಜಿ ಕಾರ್ಯದರ್ಶಿ ಡಾ.ತರುಣ್ ಸೀಮ್ ಅವರ ನಿವಾಸ ಸೇರಿದಂತೆ ದಿಲ್ಲಿ ಸರಕಾರದ ವಿವಿಧ ಕಚೇರಿಗಳ ಮೇಲೆ ಸಿಬಿಐ ಗುರುವಾರ ದಾಳಿಗಳನ್ನು ನಡೆಸಿದೆ. ದಾಳಿಗೆ ಮುನ್ನ ಅದು ಏಳು ಸರಕಾರಿ ಆಸ್ಪತ್ರೆಗಳಲ್ಲಿಯ ಎಮರ್ಜನ್ಸಿ ವಾರ್ಡ್‌ಗಳಿಗೆ ಭದ್ರತೆಯನ್ನೊದಗಿಸಲು ಖಾಸಗಿ ಸಂಸ್ಥೆಗಳಿಗೆ ದುಬಾರಿ ದರಗಳಲ್ಲಿ ಗುತ್ತಿಗೆ ನೀಡುವಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದ ಆರೋಪದಲ್ಲಿ ಸೀಮ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.

ದುಬಾರಿ ದರಗಳಲ್ಲಿ ಗುತ್ತಿಗೆಗಳನ್ನು ನೀಡುವ ಮೂಲಕ ದಿಲ್ಲಿ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಲಾಗಿದೆ. ಸುಮಾರು 10.50 ಕೋ.ರೂ.ಮೊತ್ತದ ಗುತ್ತಿಗೆಗಳನ್ನು ನೀಡಲಾಗಿತ್ತು ಎಂದು ಸಿಬಿಐ ಅಧಿಕಾರಿಯೋರ್ವರು ತಿಳಿಸಿದರು.

 ಆರೋಗ್ಯ ಇಲಾಖೆಯು ಆಪ್ ಸರಕಾರದ ಸಚಿವ ಸತ್ಯೇಂದ್ರ ಜೈನ್ ಅವರ ಅಧೀನದಲ್ಲಿರುವುದರಿಂದ ಈ ಪ್ರಕರಣವು ಮಹತ್ವವನ್ನು ಪಡೆದುಕೊಂಡಿದೆ. ಜೈನ್ ವಿರುದ್ಧ ಸಿಬಿಐ ಕಳೆದ ತಿಂಗಳು ಹಣ ಚಲುವೆ ಆರೋಪದಲ್ಲಿ ಪ್ರಾಥಮಿಕ ವಿಚಾರಣೆಯನ್ನು ದಾಖಲಿಸಿಕೊಂಡಿತ್ತು.

ಸೀಮ್ ಜೊತೆಗೆ ಮೂರು ಖಾಸಗಿ ಸಂಸ್ಥೆಗಳು ಮತ್ತು ಇತರ ಅಪರಿಚಿತ ವ್ಯಕ್ತಿಗಳನ್ನೂ ಪ್ರಕರಣದಲ್ಲಿ ಹೆಸರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News