×
Ad

ಮಲ್ಯ ಶೀಘ್ರ ಗಡೀಪಾರು: ಬ್ರಿಟನ್‌ಗೆ ಭಾರತದ ಮನವಿ

Update: 2017-05-04 20:03 IST

ಹೊಸದಿಲ್ಲಿ, ಮೇ 4: ಬ್ಯಾಂಕ್‌ಗಳಿಗೆ 9000 ಕೋಟಿ ರೂ.ಗಳಷ್ಟು ಸಾಲ ಮರುಪಾವತಿಸಬೇಕಿರುವ ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯರನ್ನು ಶೀಘ್ರವಾಗಿ ಗಡೀಪಾರು ಮಾಡುವಂತೆ ಭಾರತವು ಬ್ರಿಟನ್‌ಗೆ ಮನವಿ ಮಾಡಿದ್ದು ಭಾರತದ ನ್ಯಾಯಾಲಯ ಮತ್ತು ಬ್ರಿಟನ್ ನ್ಯಾಯಾಲಯಗಳು ನೇರವಾಗಿ ಸಂವಹನ ನಡೆಸಿದರೆ ಈ ಪ್ರಕ್ರಿಯೆ ತ್ವರಿತವಾಗಿ ನಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದೆ.

   ಬ್ರಿಟನ್‌ನ ಗೃಹ ಸಚಿವಾಲಯದ ಕಾರ್ಯದರ್ಶಿ ಪ್ಯಾಟ್ಸಿ ವಿಲ್ಕಿನ್ಸನ್ ಜೊತೆ ನಡೆದ ಮಾತುಕತೆಯಲ್ಲಿ ಈ ವಿಷಯವನ್ನು ಪ್ರಸ್ತಾವಿಸಿದ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಮೆಹ್ರಿಷಿ , ಮಲ್ಯರ ಗಡೀಪಾರಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಗಿಸುವಂತೆ ಒತ್ತಾಯಿಸಿದರು. ಅಲ್ಲದೆ ಈ ನಿಟ್ಟಿನಲ್ಲಿ ಬ್ರಿಟನ್ ನಡೆಸುತ್ತಿರುವ ಕಾರ್ಯವನ್ನು ಶ್ಲಾಘಿಸಿದರು ಮತ್ತು ಬ್ರಿಟನ್ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಗೆ ಬರುವಾಗ ಭಾರತ ಸರಕಾರ ಸಹಕಾರ ನೀಡುವುದಾಗಿ ತಿಳಿಸಿದರು. ಬ್ರಿಟನ್ ನ್ಯಾಯಾಲಯದಲ್ಲಿ ಬ್ರಿಟನ್‌ನ ‘ಕ್ರೌನ್ ಪ್ರೊಸಿಕ್ಯುಷನ್ ಸರ್ವಿಸ್ ’ಸಂಸ್ಥೆ ಭಾರತವನ್ನು ಪ್ರತಿನಿಧಿಸಲಿದೆ.

ಇದೀಗ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಮಲ್ಯ ಒಡೆತನದ ಕಿಂಗ್‌ಫಿಷರ್ ಏರ್‌ಲೈನ್ಸ್ ಸಂಸ್ಥೆ ಭಾರತದ ವಿವಿಧ ಬ್ಯಾಂಕ್‌ಗಳಿಗೆ 9000 ಕೋಟಿ ರೂ.ಗೂ ಹೆಚ್ಚಿನ ಸಾಲ ಮರುಪಾವತಿಸಬೇಕಿದೆ. ಆದರೆ 2016ರ ಮಾರ್ಚ್ 2ರಂದು ಮಲ್ಯ ಬ್ರಿಟನ್‌ಗೆ ಪಲಾಯನ ಮಾಡಿದ್ದರು.

ಆರೋಪಿಗಳ ಗಡೀಪಾರಿಗೆ ಸಂಬಂಧಿಸಿ ಭಾರತ-ಬ್ರಿಟನ್ ಮಧ್ಯೆ 1992ರಲ್ಲಿ ಒಪ್ಪಂದ ಏರ್ಪಟ್ಟಿದ್ದು ಇದುವರೆಗೆ ಕೇವಲ ಒಂದು ಪ್ರಕರಣದಲ್ಲಿ ಗಡೀಪಾರು ನಡೆಸಲಾಗಿದೆ. 2002ರಲ್ಲಿ ನಡೆದ ಗೋಧ್ರಾ ಹಿಂಸಾಚಾರದಲ್ಲಿ ಆರೋಪಿಯಾಗಿದ್ದ ಸಮೀರ್‌ಭಾ ವಿನುಭಾ ಪಟೇಲ್ ಬ್ರಿಟನ್‌ಗೆ ಪಲಾಯನ ಮಾಡಿದ್ದು ಈತನನ್ನು ಕಳೆದ ಅಕ್ಟೋಬರ್‌ನಲ್ಲಿ ಭಾರತಕ್ಕೆ ಗಡೀಪಾರು ಮಾಡಲಾಗಿದೆ.

   ಉಭಯ ಅಧಿಕಾರಿಗಳ ನಡುವಿನ ಮಾತುಕತೆಯಲ್ಲಿ ಸಿಖ್ ಭಯೋತ್ಪಾದಕ ಗುಂಪುಗಳು ಬ್ರಿಟನ್‌ನಲ್ಲಿ ತಲೆ ಎತ್ತುತ್ತಿರುವ ಬಗ್ಗೆ , ಐಸಿಸ್ ಉಗ್ರರ ಬೆದರಿಕೆ ವಿಷಯ, ಭಯೋತ್ಪಾದಕತೆಯನ್ನು ನಿಗ್ರಹಿಸುವ ಬಗ್ಗೆ ಉಭಯ ರಾಷ್ಟ್ರಗಳ ಮಧ್ಯೆ ಸಹಕಾರ ಹೆಚ್ಚಿಸುವ ಬಗ್ಗೆ , ಪರಸ್ಪರ ಕಾನೂನು ಸಹಕಾರ ಒಪ್ಪಂದ, ವೀಸಾ ಸಂಬಂಧಿತ ವಿಷಯ, ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸುವುದು ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News