9 ಲಕ್ಷ ಲೀಟರ್ ಮದ್ಯ ಕುಡಿದ ಆ ಇಲಿಗಳ ಗತಿ ಏನಾಗಿರಬೇಡ?

Update: 2017-05-04 18:03 GMT

ಪಾಟ್ನಾ,ಮೇ 4: ಬಿಹಾರದಲ್ಲಿ ಇಲಿಗಳು ಮದ್ಯ ಸೇವಿಸಿ ಚಿತ್ತಾಗುತ್ತಿವೆ...!ನಂಬಲು ಕಷ್ಟ.....ಆದರೆ ರಾಜ್ಯದ ಪೊಲೀಸರು ಹೀಗೆ ಹೇಳಿಕೊಂಡು ತಿರುಗಾಡುತ್ತಿದ್ದಾರೆ.

ಬಿಹಾರದಲ್ಲಿ ಸಂಪೂರ್ಣ ಪಾನನಿಷೇಧ ಜಾರಿಯಲ್ಲಿದೆ. ಹೀಗಾಗಿ ಇದನ್ನು ಉಲ್ಲಂಘಿಸುವ ಜನರ ಬಳಿಯಿಂದ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು, ಈಗಲೂ ವಶಪಡಿಸಿಕೊಳ್ಳಲಾಗುತ್ತಿದೆ. ಈ ಪೈಕಿ ಒಂಭತ್ತು ಲಕ್ಷ ಲೀ.ಗೂ ಅಧಿಕ ಮದ್ಯವನ್ನು ಇಲಿಗಳೇ ಕುಡಿದು ಮುಗಿಸಿವೆಯಂತೆ !

ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಸೊತ್ತುಗಳನ್ನು ಇಡಲು ಪ್ರತ್ಯೇಕ ಕೋಣೆಯೇ ಇರುತ್ತದೆ. ಬಿಹಾರದಲ್ಲಿ ಇವುಗಳನ್ನು ‘ಮಾಲ್‌ಖಾನಾ’ಗಳೆಂದು ಕರೆಯಲಾಗುತ್ತದೆ. ಈ ಮಾಲ್‌ಖಾನಾಗಳಲ್ಲಿದ್ದ ಮದ್ಯದ ಬಾಟ್ಲಿಗಳು ನಾಪತ್ತೆಯಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ರಾಜ್ಯ ಪೊಲೀಸ್ ಇಲಾಖೆಯ ಸಭೆಯೊಂದು ಇತ್ತೀಚಿಗೆ ನಡೆದಿತ್ತು. ವಶಪಡಿಸಿಕೊಳ್ಳಲಾದ ಕೆಲವು ಮದ್ಯದ ಬಾಟ್ಲಿಗಳನ್ನು ನಾಶಗೊಳಿಸಲಾಗಿದೆ ಮತ್ತು ಉಳಿದ ಮದ್ಯವನ್ನೆಲ್ಲ ಪಾನಪ್ರಿಯ ಇಲಿಗಳು ಕುಡಿದು ಮುಗಿಸಿವೆ ಎಂದು ಹೇಳುವ ಮೂಲಕ ಈ ಸಭೆಯಲ್ಲಿ ಎಲ್ಲರ ಕಿವಿಗಳಿಗೆ ಹೂವುಗಳನ್ನಿಡಲಾಗಿತ್ತು.

ಈ ವಿಷಯದಲ್ಲಿ ವಿಚಾರಣೆ ನಡೆಸುವಂತೆ ಪಾಟ್ನಾ ಐಜಿಗೆ ಸೂಚಿಸಲಾಗಿದೆ. ಅವರು ವರದಿ ಸಲ್ಲಿಸಿದ ಬಳಿಕ ಪೊಲೀಸ್ ಮುಖ್ಯಕಚೇರಿಯು ಮುಂದಿನ ಕ್ರಮವನ್ನು ಕೈಗೊಳ್ಳಲಿದೆ ಎಂದು ಎಡಿಜಿಪಿ ಎಸ್.ಕೆ.ಸಿಂಘಾಲ್ ಅವರು ಗುರುವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ತನ್ಮಧ್ಯೆ ಮದ್ಯಪಾನದ ಆರೋಪದಲ್ಲಿ ಬಿಹಾರ ಪೊಲೀಸರ ಸಂಘದ ಅಧ್ಯಕ್ಷ ನಿರ್ಮಲ್ ಸಿಂಗ್ ಮತ್ತು ಸದಸ್ಯ ಶಂಶೇರ್ ಸಿಂಗ್ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ನ್ಯಾಯಾಲಯವು ಇಬ್ಬರಿಗೂ ಮೇ 18ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಅಂದ ಹಾಗೆ ದನಗಳ ಮೇವು ತಿನ್ನುವವರಿರುವ ಲಾಲೂ ಪ್ರಸಾದರ ಬಿಹಾರದಲ್ಲಿ ಮದ್ಯ ಕುಡಿಯುವ ಇಲಿಗಳು ಇದ್ದರೂ ಇರಬಹುದಲ್ಲವೇ...?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News