×
Ad

3000 ಕೋ.ರೂ. ಮೊತ್ತದ ನಿರ್ಭಯ ನಿಧಿ ಯೋಜನೆ ; ಅನುಷ್ಠಾನದ ಮಾಹಿತಿ ಇಲ್ಲ ಎನ್ನುತ್ತಿರುವ ಇಲಾಖೆ

Update: 2017-05-05 23:19 IST

ಹೊಸದಿಲ್ಲಿ, ಮೇ 5: ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಮಹಿಳೆಯರ ರಕ್ಷಣಾ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ 3000 ಕೋಟಿ ರೂ. ಮೂಲಧನವುಳ್ಳ ನಿರ್ಭಯ ನಿಧಿ ಸ್ಥಾಪಿಸುವುದಾಗಿ 2013ರಲ್ಲಿ ಘೋಷಿಸಿತ್ತು. ಆದರೆ ಈ ನಿಧಿಯನ್ನು ಯಾವ ರೀತಿ ಬಳಸಲಾಗಿದೆ ಎಂಬ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ(ಡಬ್ಲೂಸಿಡಿ)ದ ಬಳಿ ಯಾವುದೇ ಮಾಹಿತಿ ಇಲ್ಲದಿರುವುದು ಗಮನಾರ್ಹವಾಗಿದೆ.

ನಿರ್ಭಯ ನಿಧಿಯನ್ನು ಬಳಸದಿರುವ ಬಗ್ಗೆ ಸುಪ್ರೀಂಕೋರ್ಟ್ 2016ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಪ್ರಶ್ನಿಸಿತ್ತು. ಇದಕ್ಕೆ 2017ರಲ್ಲಿ ಸ್ಪಷ್ಟೀಕರಣ ನೀಡಿದ್ದ ಕೇಂದ್ರ ಸರಕಾರ, ನಿಧಿಯ ಮೇಲ್ವಿಚಾರಣೆ ಮತ್ತು ವಿನಿಯೋಗದ ಬಗ್ಗೆ ವಿತ್ತ ಸಚಿವಾಲಯವು ಆಗಿಂದಾಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸುತ್ತಿದೆ ಎಂದು ತಿಳಿಸಿತ್ತು.

 ಅಲ್ಲದೆ ಈ ಸ್ಪಷ್ಟೀಕರಣದ ಜೊತೆ ಹಲವು ಯೋಜಿತ ಕಾರ್ಯಗಳ ವಿವರವನ್ನೂ ನೀಡಿತ್ತು. ಅದರಲ್ಲಿ ರೈಲ್ವೇ ಇಲಾಖೆಯ - ಸಮಗ್ರ ತುರ್ತುಸ್ಥಿತಿ ಪ್ರತಿಕ್ರಿಯೆ ನಿರ್ವಹಣಾ ವ್ಯವಸ್ಥೆ, ಗೃಹ ಸಚಿವಾಲಯದ- ತುರ್ತುಸ್ಥಿತಿ ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ, ಆಂಧ್ರಪ್ರದೇಶದ ಅಭಯ ಪ್ರೊಜೆಕ್ಟ್, ರಾಜಸ್ತಾನದ ಚಿರಾಲಿ ಫ್ರೆಂಡ್ಸ್ ಪ್ರೊಜೆಕ್ಟ್‌ಗಳು ಸೇರಿವೆ.

500 ಕೋಟಿ ರೂ. ಮೊತ್ತದ ರೈಲ್ವೇ ಇಲಾಖೆಯ ಪ್ರೊಜೆಕ್ಟ್‌ನಲ್ಲಿ ದೇಶದ 983 ರೈಲ್ವೇ ನಿಲ್ದಾಣಗಳಲ್ಲಿ ದಿನದ 24 ಗಂಟೆಯೂ ಮಹಿಳಾ ಪ್ರಯಾಣಿಕರಿಗೆ ಭದ್ರತೆ ಒದಗಿಸುವ ಪ್ರಸ್ತಾಪವಿದೆ. ಗೃಹ ಸಚಿವಾಲಯದ ಪ್ರೊಜೆಕ್ಟ್‌ಗೆ 322 ಕೋಟಿ ರೂ. ನಿಗದಿಗೊಳಿಸಲಾಗಿದೆ.

 (ಆಟೊ ರಿಕ್ಷಾ ಮುಂತಾದ ವಾಹನಗಳಲ್ಲಿ )ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಸುರಕ್ಷೆ ಒದಗಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶ 139 ಕೋಟಿ ರೂ. ಮೊತ್ತದ ‘ಅಭಯ ಪ್ರೊಜೆಕ್ಟ್’ ರೂಪಿಸಿದೆ.

ಚಿರಾಲಿ ಫ್ರೆಂಡ್ಸ್ ಪ್ರೊಜೆಕ್ಟ್ ಒಂದು ವಿಶಿಷ್ಟ ಕಾರ್ಯಯೋಜನೆ. ಇಲ್ಲಿ ರಾಜಸ್ತಾನದ 2071 ಗ್ರಾಮ ಪಂಚಾಯತ್‌ಗಳು ಒಳಗೊಂಡಿರುವ 7 ಜಿಲ್ಲೆಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯಲ್ಲಿ ಕ್ರಿಯಾಪಡೆಗಳನ್ನು ರಚಿಸಲಾಗುತ್ತದೆ. ಈ ಪ್ರೊಜೆಕ್ಟ್‌ನ ಮೊತ್ತ 11 ಕೋಟಿ ರೂ. ಇದುವರೆಗೆ ವಿವಿಧ ಪ್ರೊಜೆಕ್ಟ್‌ಗಳಿಗೆ ನಿಗದಿಗೊಳಿಸಿದ ಮೊತ್ತ ಸುಮಾರು 1,530 ಕೋಟಿ ರೂ. ಆಗಿದ್ದರೆ ಆಗಿರುವ ಖರ್ಚುವೆಚ್ಚ ಸುಮಾರು 400 ಕೋಟಿ ರೂ. ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ. ನಿಧಿಯನ್ನು ವಿವಿಧ ಎನ್‌ಜಿಒ ಸಂಸ್ಥೆ ಅಥವಾ ಇಲಾಖೆಗೆ ಹಂಚಿಕೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸುತ್ತದೆ. ಆದರೆ ಈ ನಿಧಿಯನ್ನು ಯಾವ ರೀತಿ ಉಪಯೋಗಿಸಲಾಗಿದೆ ಎಂಬ ಮಾಹಿತಿ ಇಲಾಖೆಯಲ್ಲಿಲ್ಲ.

 ಈ ಹಿನ್ನೆಲೆಯಲ್ಲಿ ಸರಕಾರ ನೀಡಿರುವ ಸ್ಪಷ್ಟೀಕರಣ ಗಮನಿಸಿದರೆ ಯೋಜನೆ ಮತ್ತು ಪ್ರಾಜೆಕ್ಟ್‌ಗಳನ್ನು ಕರಡು ರೂಪದಲ್ಲಿ ಸಿದ್ದಪಡಿಸಲಾಗಿದೆ. ಆದರೆ ವಾಸ್ತವವಾಗಿ ಯಾವುದೇ ಕಾರ್ಯ ಅನುಷ್ಠಾನಗೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮೂರು ತಿಂಗಳ ಹಿಂದೆ ನೀಡಿದ ಸ್ಪಷ್ಟೀಕರಣವನ್ನೇ ಇಂದು ಕೂಡಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ನೀಡುತ್ತಿರುವುದು ವಿಪರ್ಯಾಸವಾಗಿದೆ.


 
     

 
     


 
     

 
     


     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News