ವಿಜ್ಞಾನ ಕ್ಷೇತ್ರ ನೂತನ ಆವಿಷ್ಕಾರಗಳೊಂದಿಗೆ ಮುನ್ನಡೆಯಬೇಕು: ಡಾ.ಎ.ಕೆ. ಸಿಂಗ್

Update: 2017-05-05 18:33 GMT

ಕೊಣಾಜೆ, ಮೇ 5: ಇಂದಿನ ಜಾಗತಿಕ ಮಟ್ಟದಲ್ಲಿ ಸದೃಢವಾಗಿ ಬೆಳೆದು ನಿಲ್ಲಬೇಕಾದರೆ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದ ಸಾಧನೆಗಳೊಂದಿಗೆ ಸಂಶೋಧನೆಗಳು ಹಾಗೂ ನೂತನ ಆವಿಷ್ಕಾರಗಳೊಂದಿಗೆ ಮುನ್ನಡೆಯಬೇಕು ಎಂದು ದಿಲ್ಲಿಯ ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಆ್ಯಂಡ್ ಅಲೈಡ್ ಸಯನ್ಸಸ್ ಇದರ ನಿರ್ದೇಶಕ ಡಾ.ಎ.ಕೆ. ಸಿಂಗ್ ಅಭಿಪ್ರಾಯಪಟ್ಟರು.

ನಿಟ್ಟೆ ವಿಶ್ವವಿದ್ಯಾನಿಲಯದ ರೇಡಿಯೇಶನ್ ಒಂಕಾಲಜಿ ವಿಭಾಗ ಮತ್ತು ಸೆಂಟ್ರಲ್ ರಿಸರ್ಚ್ ಲ್ಯಾಬೋರೇಟರಿ, ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿ ಇದರ ಆಶ್ರಯದಲ್ಲಿ ದಿಲ್ಲಿಯ ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಆ್ಯಂಡ್ ಅಲೈಡ್ ಸಯನ್ಸಸ್ ಇದರ ಸಹಯೋಗದೊಂದಿಗೆ ‘ಬೈಯೋಡೋಸಿಮೆಟ್ರಿ’ ಎಂಬ ವಿಷಯದಲ್ಲಿ ನಡೆಯುವ 3 ದಿನಗಳ ಕಾರ್ಯಾಗಾರ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

 ವಿಕಿರಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಬೈಯೋಡೋಸಿಮೆಟ್ರಿಯ ಪಾತ್ರವು ಪ್ರಮುಖ ವಾಗಿದೆ. ಈ ನಿಟ್ಟಿನಲ್ಲಿ ವಿದೇಶಗಳಲ್ಲಿ ಬಹಳಷ್ಟು ಸಂಶೋಧನೆ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಭಾರತವು ಇತ್ತೀಚಿಗೆ ಈ ಕ್ಷೇತ್ರದಲ್ಲಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸಾಧನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯದಿಂದ ಹೆಚ್ಚು ಹೆಚ್ಚು ಸಂಶೋಧನಾ ಕಾರ್ಯಗಳು ನಡೆದು ಹೊಸ ಹೊಸ ಆವಿಷ್ಕಾರಗಳೊಂದಿಗೆ ದೇಶಕ್ಕೆ ಕೊಡುಗೆ ನೀಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಿಜ್ಞಾನಿ ಡಾ.ಬಿ.ಎಸ್. ರಾವ್ ಅವರನ್ನು ಸನ್ಮಾನಿಸಲಾಯಿತು.

 ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ ವಹಿಸಿ ಮಾತನಾಡಿದರು. ಕಾರ್ಯಾಗಾರದ ಸಂಯೋಜಕಿ ಡಾ.ಮಧುಬಾಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಷೇಮಾದ ಡೀನ್ ಡಾ.ಬಿ.ಸತೀಶ್ ಭಂಡಾರಿ, ಕಾರ್ಯಕ್ರಮ ಸಂಯೋಜಕ ಡಾ.ಜಯರಾಮ್ ಶೆಟ್ಟಿ, ಸಹ ಸಂಯೋಜಕ ಡಾ.ಸುಚೇತಾ ಕುಮಾರಿ, ದಿಲ್ಲಿಯ ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಆಂಡ್ ಅಲೈಡ್ ಸಯನ್ಸಸ್‌ನ ಡಾ.ಎನ್.ಕೆ.ಚೌಧರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News