ನಿರ್ಭಯಾ ಪ್ರಕರಣದ ‘ಅಪ್ರಾಪ್ತ’ ಅಪರಾಧಿ ಈಗೇನು ಮಾಡುತ್ತಿದ್ದಾನೆ ಗೊತ್ತೇ?

Update: 2017-05-06 03:57 GMT

ಹೊಸದಿಲ್ಲಿ, ಮೇ 6: ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ದೋಷಿಯೆಂದು ಘೋಷಿಸಲ್ಪಟ್ಟಿದ್ದ ಹಾಗೂ ಘಟನೆ ನಡೆದಾಗ ಅಪ್ರಾಪ್ತ ವಯಸ್ಕನಾಗಿದ್ದ ಯುವಕ ಬಾಲ ನ್ಯಾಯ ಮಂಡಳಿಯ ಆದೇಶದಂತೆ ಮೂರು ವರ್ಷಗಳ ಕಾಲ ಪುರ್ನವಸತಿ ಕೇಂದ್ರವೊಂದರಲ್ಲಿದ್ದು ಬಿಡುಗಡೆಗೊಂಡು ಈಗ ಆ ಘಟನೆಯ ನಂತರದ ಬೆಳವಣಿಗೆಗಳ ಬಗ್ಗೆ ಪರಿವೆಯೇ ಇಲ್ಲದೆ ದಕ್ಷಿಣದ ರೆಸ್ಟೋರೆಂಟ್ ಒಂದರಲ್ಲಿ ಅಡುಗೆಯಾಳಾಗಿ ಕೆಲಸ ಮಾಡುತ್ತಿದ್ದಾನೆ. ಆತನಿಗೀಗ 23 ವರ್ಷ ವಯಸ್ಸು.

‘‘ತನ್ನನ್ನು ಹೊಡೆದು ಸಾಯಿಸಬಹುದೆನ್ನುವ ಭಯ ಆತನನ್ನು ಯಾವತ್ತೂ ಕಾಡುತ್ತಿತ್ತು. ಇದೀಗ ಘಟನೆಯ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಿರುವುದರಿಂದ ಎಲ್ಲರ ಗಮನ ಆತನ ಕಡಗೆ ಮತ್ತೆ ಹರಿಯಬಹುದೆನ್ನುವ ಭಯದಿಂದ ಆತನನ್ನು ಬಹಳ ದೂರು ಕರೆದುಕೊಂಡು ಹೋಗಿದ್ದೇವೆ. ಆತ ಕೆಲಸ ಮಾಡುವಲ್ಲಿನ ಮಾಲಕನಿಗೂ ಆತನ ಹಿನ್ನೆಲೆಯ ಬಗ್ಗೆ ತಿಳಿದಿಲ್ಲ’’ ಎಂದು ಆತನ ಪುರ್ನವಸತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್‌ಜಿಒ ಒಂದರ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಅವರು ಬಹಿರಂಗಗೊಳಿಸಿಲ್ಲ ಎಂದು ಹಿಂದುಸ್ತಾನ್ ಟೈಮ್ಸ್ ವರದಿಯೊಂದು ಹೇಳಿದೆ.

ಡಿಸೆಂಬರ್ 20, 2015ರಂದು ಆತನ ಬಿಡುಗಡೆಯಾದ ನಂತರ ಸ್ವಲ್ಪ ದಿನ ಆತ ಎನ್‌ಜಿಒ ಒಂದರ ರಕ್ಷಣೆಯಲ್ಲಿದ್ದ ಎಂದೂ ಅವರು ತಿಳಿಸಿದ್ದಾರೆ.

ಈ ಯುವಕನ ಹಿನ್ನೆಲೆ ಹೆಚ್ಚಿನವರಿಗೆ ತಿಳಿದಿಲ್ಲ ಎನ್ನುವ ಅವರು, ಆತ ದಿಲ್ಲಿಯಿಂದ 240 ಕಿ.ಮೀ. ದೂರದಲ್ಲಿರುವ ತನ್ನ ಮನೆಯಿಂದ 11 ವರ್ಷದವನಿದ್ದಾಗ ಓಡಿ ಬಂದಿದ್ದ ಹಾಗೂ ಅಲ್ಲಿ ರಾಮ್ ಸಿಂಗ್ ಮತ್ತಿತರರ ಪರಿಚಯ ಆತನಿಗಾಗಿತ್ತು. ನಿರ್ಭಯಾಳ ಮೇಲೆ ಅತ್ಯಾಚಾರ ನಡೆದ ಬಸ್ಸನ್ನು ಆತ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ ಹಾಗೂ ಅದರ ಬದಲಾಗಿ ಅವರು ಆತನಿಗೆ ಆಹಾರ ನೀಡುತ್ತಿದ್ದರು. ಘಟನೆ ನಡೆದ ರಾತ್ರಿ ಕೂಡ ರಾಮ್ ಸಿಂಗ್ ಮತ್ತಿತರರು ಆತನನ್ನು ತಮ್ಮೊಂದಿಗೆ ಬರುವಂತೆ ಹೇಳಿದ್ದರು. ಆತನ ಕುಟುಂಬ ಈಗಲೂ ಅದೇ ಗ್ರಾಮದಲ್ಲಿದ್ದು ಆತನ ಹಿರಿಯ ಸಹೋದರಿ ತನ್ನ ಅನಾರೋಗ್ಯಪೀಡಿತ ತಾಯಿ, ಹಾಸಿಗೆ ಹಿಡಿದಿರುವ ತಂದೆ ಹಾಗೂ ಸಹೋದರಿಯರನ್ನು ಸಲಹುತ್ತಿದ್ದಾಳೆ.

ಆತನನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ ಮೇಲೆ ಧಾರ್ಮಿಕತೆ ಮೈಗೂಡಿಸಿಕೊಂಡಿದ್ದನೆಂದು ಆ ಅಧಿಕಾರಿ ಹೇಳಿದ್ದಾರೆ. ಮೊದಮೊದಲು ಯಾರೊಂದಿಗೂ ಬೆರೆಯದೇ ಇದ್ದ ಆತ ಕ್ರಮೇಣ ಇತರರೊಂದಿಗೆ ಮಾತನಾಡಲಾರಂಭಿಸಿದ ಹಾಗೂ ಆಹಾರ ತಯಾರಿಸಿದಾಗಲೆಲ್ಲಾ ಅದನ್ನು ಸ್ವಾದಿಷ್ಟಭರಿತವಾಗಿಸಲು ಕೊನೆ ಕ್ಷಣದ ಕೆಲವೊಂದು ಮಾರ್ಪಾಟುಗಳನ್ನು ಮಾಡುತ್ತಿದ್ದನೆಂದು ಆ ಅಧಿಕಾರಿ ನೆನಪಿಸಿಕೊಂಡಿದ್ದಾರೆ. ಅನಕ್ಷರಸ್ಥನಾಗಿದ್ದ ಆತ ಪುರ್ನವಸತಿ ಕೇಂದ್ರದಲ್ಲಿ ತನ್ನ ಹೆಸರು ಬರೆಯುವುದನ್ನು ಕಲಿತಿದ್ದ ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News