ಇಂಡೋನೇಶ್ಯ ಜೈಲಿನಿಂದ 200 ಕೈದಿಗಳು ಪರಾರಿ
ಪೆಕನ್‌ಬಾರು (ಇಂಡೋನೇಶ್ಯ), ಮೇ 6: ಇಂಡೋನೇಶ್ಯದ ಸುಮಾತ್ರ ದ್ವೀಪದ ಕಿಕ್ಕಿರಿದ ಜೈಲೊಂದರಿಂದ ಸುಮಾರು 200 ಕೈದಿಗಳು ಶುಕ್ರವಾರ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದರು. ಅವರ ಪೈಕಿ ಹೆಚ್ಚಿನವರನ್ನು ಮತ್ತೆ ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಸುಮಾತ್ರ ದ್ವೀಪದ ಪೆಕನ್‌ಬಾರು ನಗರದ ಜೈಲೊಂದರಲ್ಲಿ ಶುಕ್ರವಾರ ಕೈದಿಗಳನ್ನು ಪ್ರಾರ್ಥನೆಗಾಗಿ ಸೆಲ್‌ಗಳಿಂದ ಹೊರಗೆ ಬಿಡಲಾಗಿತ್ತು. ಆ ಸಂದರ್ಭದಲ್ಲಿ ಸುಮಾರು 200 ರಷ್ಟು ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ.
ಸುಮಾರು 80 ಕೈದಿಗಳನ್ನು ತಕ್ಷಣವೇ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಹಾಗೂ ಶನಿವಾರ ಹೆಚ್ಚಿನವರನ್ನು ಹಿಡಿಯಲಾಗಿದೆ.
‘‘ಈವರೆಗೆ 171 ಮಂದಿ ಕೈದಿಗಳನ್ನು ಮರುವಶಕ್ಕೆ ತೆಗೆದುಕೊಳ್ಳಲಾಗಿದೆ ಅಥವಾ ಅವರೇ ಶರಣಾಗಿದ್ದಾರೆ. ತಪ್ಪಿಸಿಕೊಂಡವರ ನಿಖರ ಸಂಖ್ಯೆಯನ್ನು ತಿಳಿಯಲು ನಮಗಿನ್ನೂ ಸಾಧ್ಯವಾಗಿಲ್ಲ’’ ಎಂದು ಸ್ಥಳೀಯ ಪೊಲೀಸ್ ವಕ್ತಾರರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಹೆಚ್ಚಿನ ಕೈದಿಗಳನ್ನು ಪೆಕನ್‌ಬಾರು ನಗರದ ಸಮೀಪದಲ್ಲೇ ಮತ್ತೆ ವಶಕ್ಕೆ ಪಡೆದುಕೊಳ್ಳಲಾಗಿದೆ. ತಪ್ಪಿಸಿಕೊಂಡ ಕೈದಿಗಳ ಪೈಕಿ ಹಲವಾರು ಮಂದಿ ನೇರವಾಗಿ ಇನ್ನೊಂದು ಜೈಲಿಗೆ ಹೋಗಿ ಶರಣಾದರು.
ಜೈಲಿನಲ್ಲಿರುವ ಅಮಾನವೀಯ ಸ್ಥಿತಿಗತಿಗೆ ಬೇಸತ್ತು ಅಲ್ಲಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿದೆವು ಎಂದು ಕೈದಿಗಳು ಪೊಲೀಸರಿಗೆ ತಿಳಿಸಿದರು ಎನ್ನಲಾಗಿದೆ.
300 ಕೈದಿಗಳ ಜೈಲಿನಲ್ಲಿ 1,870
ಈ ಪುರುಷರ ಜೈಲಿನ ಸಾಮರ್ಥ್ಯ ಕೇವಲ 300 ಕೈದಿಗಳು. ಆದರೆ, ಅಲ್ಲಿ 1,870 ಕೈದಿಗಳನ್ನು ಹಿಡಿದಿಡಲಾಗಿದೆ ಎನ್ನಲಾಗಿದೆ. ಜೈಲಿನಲ್ಲಿ ಕೇವಲ ಐವರು ಕಾವಲುಗಾರರು ಮತ್ತು ಓರ್ವ ಹಮಾಲಿ ಇದ್ದಾರೆ.
ಜೈಲಿನ ಕಾವಲುಗಾರರು ತಮ್ಮಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬುದಾಗಿ ಕೈದಿಗಳು ಆರೋಪಿಸುತ್ತಾರೆ.