ವೆನೆಝುವೆಲದಲ್ಲಿ ಅರಾಜಕತೆ, ಲೂಟಿ : ಸಾವಿನ ಸಂಖ್ಯೆ 36ಕ್ಕೆ ಏರಿಕೆ

Update: 2017-05-06 15:56 GMT

ವೆಲೆನ್ಶಿಯ (ವೆನೆಝುವೆಲ), ಮೇ 6: ವೆನೆಝುವೆಲದಲ್ಲಿ ಅರಾಜಕತೆ ತಾಂಡವವಾಡುತ್ತಿದ್ದು, ದೇಶದ ಹಲವು ನಗರಗಳಲ್ಲಿ ಲೂಟಿ ನಡೆಯುತ್ತಿದೆ.
ಸರಕಾರ ವಿರೋಧಿ ಪ್ರತಿಭಟನೆಗಳ ವೇಳೆ ಶುಕ್ರವಾರ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಂದು ತಿಂಗಳಿನಿಂದ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 36ಕ್ಕೇರಿದೆ.

ಅಧ್ಯಕ್ಷ ನಿಕೊಲಸ್ ಮಡುರೊ ಅವರನ್ನು ವಜಾಗೊಳಿಸಿ ಚುನಾವಣೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿ ಎಪ್ರಿಲ್ ಒಂದರಿಂದ ಜನರು ಸರಕಾರಿ ವಿರೋಧಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಆಹಾರ, ಔಷಧಿ ಮತ್ತು ಇತರ ಅವಶ್ಯಕ ವಸ್ತುಗಳ ಕೊರತೆಗೆ ಕಾರಣವಾಗುವ ಆರ್ಥಿಕ ಬಿಕ್ಕಟ್ಟಿಗೆ ಅಧ್ಯಕ್ಷ ಮಡುರೊ ಅವರೇ ಹೊಣೆ ಎಂಬುದಾಗಿ ಪ್ರತಿಭಟನಕಾರರು ಆರೋಪಿಸುತ್ತಾರೆ.

ರೊಸಾರಿಯೊ ಡಿ ಪೆರಿಜ ನಗರದಲ್ಲಿ ಶುಕ್ರವಾರ ಪ್ರತಿಭಟನಕಾರರ ಆಕ್ರೋಶ ಸ್ಫೋಟಗೊಂಡಿತು. ಅಲ್ಲಿ ಯುವ ಪ್ರತಿಭಟನಕಾರರು ಮಾಜಿ ಅಧ್ಯಕ್ಷ ಹಾಗೂ ಹಾಲಿ ಅಧ್ಯಕ್ಷ ಮಡುರೊ ಅವರ ಪೋಷಕ ಹ್ಯೂಗೊ ಚವೇಝ್‌ರ ಪ್ರತಿಮೆಗೆ ಬೆಂಕಿಹಚ್ಚಿ ಧ್ವಂಸಗೊಳಿಸಿದರು.

ವೆಲೆನ್ಶಿಯ ಸೇರಿದಂತೆ ಹಲವಾರು ನಗರಗಳಲ್ಲಿ ಈ ವಾರ ಲೂಟಿ ಮತ್ತು ದೊಂಬಿ ನಡೆದಿದೆ. ಹಲವಾರು ಅಂಗಡಿಗಳನ್ನು ದುಷ್ಕರ್ಮಿಗಳು ದೋಚಿದ್ದಾರೆ. ಮಂಗಳವಾರದ ಬಳಿಕ ದುಷ್ಕರ್ಮಿಗಳು ಕನಿಷ್ಠ 70 ಅಂಗಡಿಗಳನ್ನು ದೋಚಿದ್ದಾರೆ.

ಚುನಾವಣೆ ನಡೆಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಮಡುರೊ ತಿರಸ್ಕರಿಸಿದ್ದಾರೆ.  ಪ್ರತಿಭಟನೆಗಳ ವೇಳೆ ಹಿಂಸಾಚಾರ ನಡೆಸಲು ಎದುರಾಳಿ ಬಣವು ದುಷ್ಕರ್ಮಿಗಳನ್ನು ಛೂಬಿಡುತ್ತಿದೆ ಎಂಬುದಾಗಿ ಪ್ರತಿಪಕ್ಷ ಹಾಗೂ ಸರಕಾರಗಳೆರಡೂ ಆರೋಪಿಸಿವೆ.

ಮಡುರೊ ಸೇನೆಯ ಬೆಂಬಲವನ್ನು ಹೊಂದಿದ್ದಾರೆ. ಪ್ರತಿಭಟನಕಾರರನ್ನು ಎದುರಿಸುವಲ್ಲಿ ಸೇನೆ ಪ್ರಮುಖ ಪಾತ್ರ ವಹಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News