10ನೆ ಆವೃತ್ತಿಯ ಐಪಿಎಲ್: ಮುಂಬೈ ಇಂಡಿಯನ್ಸ್ ಪ್ಲೇ-ಆಫ್‌ಗೆ ಪ್ರವೇಶ
ಹೊಸದಿಲ್ಲಿ, ಮೇ 6: ಆತಿಥೇಯ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು 146 ರನ್‌ಗಳ ಅಂತರದಿಂದ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ 10ನೆ ಆವೃತ್ತಿಯ ಐಪಿಎಲ್‌ನಲ್ಲಿ ಪ್ಲೇ-ಆಫ್‌ಗೆ ಪ್ರವೇಶಿಸಿದ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ.
ಇಲ್ಲಿನ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಶನಿವಾರ ನಡೆದ 45ನೆ ಐಪಿಎಲ್ ಪಂದ್ಯದಲ್ಲಿ ಗೆಲುವಿಗೆ 213 ಕಠಿಣ ಗುರಿ ಪಡೆದಿದ್ದ ಡೆಲ್ಲಿ ತಂಡ ಹರ್ಭಜನ್ ಸಿಂಗ್ ನೇತೃತ್ವದ ಬೌಲಿಂಗ್ ದಾಳಿಗೆ ಉತ್ತರಿಸಲಾಗದೇ 13.4 ಓವರ್‌ಗಳಲ್ಲಿ ಕೇವಲ 66 ರನ್‌ಗೆ ಆಲೌಟಾಯಿತು. ಯಾವ ಹಂತದಲ್ಲೂ ಹೋರಾಟವನ್ನೇ ನೀಡದ ಡೆಲ್ಲಿಯ ಪರ ಕರುಣ್ ನಾಯರ್(21) ಅಗ್ರ ಸ್ಕೋರರ್ ಎನಿಸಿಕೊಂಡರು.
ಕಳೆದ ಪಂದ್ಯದಲ್ಲಿ ಮಿಂಚಿದ್ದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್(0) ಹಾಗೂ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್(0) ಖಾತೆ ತೆರೆಯಲು ವಿಫಲರಾಗಿದ್ದು ತಂಡಕ್ಕೆ ಭಾರೀ ಹಿನ್ನಡೆಯಾಯಿತು. ಶ್ರೇಯಸ್ ಐಯ್ಯರ್(3), ಆ್ಯಂಡರ್ಸನ್(10), ಮರ್ಲಾನ್ ಸ್ಯಾಮುಯೆಲ್ಸ್(1) ಹಾಗೂ ಕುಮಿನ್ಸ್(10) ಬೇಗನೆ ಔಟಾದರು.
ಮುಂಬೈನ ಪರ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್(3-22), ಕರಣ್ ಶರ್ಮ(3-11) ಹಾಗೂ ಮಾಲಿಂಗ(2-5) 8 ವಿಕೆಟ್‌ಗಳನ್ನು ಹಂಚಿಕೊಂಡರು. 43 ಎಸೆತಗಳಲ್ಲಿ 66 ರನ್ ಸಿಡಿಸಿದ ಸಿಮೊನ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮುಂಬೈ ಇಂಡಿಯನ್ಸ್ 212/3: ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಆಟಗಾರ ಸಿಮೊನ್ಸ್(66) ಹಾಗೂ ಆಲ್‌ರೌಂಡರ್ ಕೀರನ್ ಪೊಲಾರ್ಡ್(ಅಜೇಯ 63) ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 212 ರನ್ ಕಲೆ ಹಾಕಿತು.
ಇನಿಂಗ್ಸ್ ಆರಂಭಿಸಿದ ಸಿಮೊನ್ಸ್ ಹಾಗೂ ಪಾರ್ಥಿವ್ ಪಟೇಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 8.4 ಓವರ್‌ಗಳಲ್ಲಿ 79 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. 25 ರನ್ ಗಳಿಸಿದ ಪಟೇಲ್ ಸ್ಪಿನ್ನರ್ ಅಮಿತ್ ಮಿಶ್ರಾರಿಗೆ ವಿಕೆಟ್ ಒಪ್ಪಿಸಿದರು. 43 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ಗಳ ಸಹಿತ 66 ರನ್ ಗಳಿಸಿದ್ದ ಸಿಮೊನ್ಸ್ ಆರ್ಭಟಕ್ಕೆ ಆ್ಯಂಡರ್ಸನ್ ತೆರೆ ಎಳೆದರು.
ಅಜೇಯ 63 ರನ್(35 ಎಸೆತ, 5 ಬೌಂಡರಿ, 4 ಸಿಕ್ಸರ್) ಗಳಿಸಿದ ಪೊಲಾರ್ಡ್ ಆಲ್‌ರೌಂಡರ್ ಕ್ರುನಾಲ್ ಪಾಂಡೆಯವರೊಂದಿಗೆ 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 29 ಎಸೆತಗಳಲ್ಲಿ 59 ರನ್ ಸೇರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಸಂಕ್ಷಿಪ್ತ ಸ್ಕೋರ್
ಮುಂಬೈ: 20 ಓವರ್‌ಗಳಲ್ಲಿ 212/3
(ಸಿಮೊನ್ಸ್ 66, ಪೊಲಾರ್ಡ್ ಅಜೇಯ 63, ಪಾಂಡ್ಯ ಅಜೇಯ 29, ಆ್ಯಂಡರ್ಸನ್ 1-29)
ಡೆಲ್ಲಿ: 13.4 ಓವರ್‌ಗಳಲ್ಲಿ 66 ರನ್‌ಗೆ ಆಲೌಟ್
(ಕರುಣ್ ನಾಯರ್ 21, ಆ್ಯಂಡರ್ಸನ್ 10, ಕುಮಿನ್ಸ್ 10, ಹರ್ಭಜನ್ ಸಿಂಗ್ 3-22, ಮಾಲಿಂಗ 2-5, ಕರಣ್ ಶರ್ಮ 3-11)