×
Ad

ಚಾಂಪಿಯನ್ಸ್ ಟ್ರೋಫಿ: ಸೋಮವಾರ ಭಾರತ ತಂಡ ಪ್ರಕಟ ಸಾಧ್ಯತೆ

Update: 2017-05-06 23:37 IST

ಹೊಸದಿಲ್ಲಿ, ಮೇ 6: ಇಂಗ್ಲೆಂಡ್‌ನಲ್ಲಿ ಜೂ.1 ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಸೋಮವಾರ ಬಿಸಿಸಿಐ ಪ್ರಕಟಿಸುವ ಸಾಧ್ಯತೆಯಿದೆ.

‘‘ಬಿಸಿಸಿಐನ ವಿಶೇಷ ಸಾಮಾನ್ಯ ಸಭೆ(ಎಸ್‌ಜಿಎಂ)ರವಿವಾರ ನಡೆಯಲಿದೆ. ಬಿಸಿಸಿಐ ಜೊತೆ ಕಾರ್ಯದರ್ಶಿ ಅಮಿತಾಭ್ ಚೌಧರಿ ಆಯ್ಕೆ ಸಮಿತಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಂಬರುವ ಟೂರ್ನಿಗೆ ಸೋಮವಾರ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ನನ್ನ ಪ್ರಕಾರ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲೇಬೇಕು’’ ಎಂದು ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಅಧಿಕಾರಿ ಸಿಕೆ ಖನ್ನಾ ಹೇಳಿದ್ದಾರೆ.

ಐಸಿಸಿ ಆದಾಯ ಹಂಚಿಕೆ ಮಾದರಿಯ ವಿಷಯದಲ್ಲಿ ಮುಖಭಂಗ ಅನುಭವಿಸಿದ್ದ ಬಿಸಿಸಿಐ ಚಾಂಪಿಯನ್ಸ್ ಟ್ರೋಫಿಯನ್ನು ಬಹಿಷ್ಕರಿಸುವ ಬಗ್ಗೆ ಚಿಂತನೆ ನಡೆಸುತ್ತಿತ್ತು. ಸುಪ್ರೀಂಕೋರ್ಟಿನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಸಮಿತಿ ಬಿಸಿಸಿಐನ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು. ಚಾಂಪಿಯನ್ ಟ್ರೋಫಿಯಲ್ಲಿ ಭಾಗವಹಿಸಲು ಒಲವು ಹೊಂದಿರುವ ಬಿಸಿಸಿಐನ ಪೂರ್ವ ಹಾಗೂ ಉತ್ತರ ವಲಯದ ಸದಸ್ಯರನ್ನು ಭೇಟಿಯಾಗಿ ಚರ್ಚಿಸಿತ್ತು.

ಗುರುವಾರ ಬಿಸಿಸಿಐಗೆ ಪತ್ರವನ್ನು ಬರೆದಿದ್ದ ಆಡಳಿತಾಧಿಕಾರಿಗಳ ಸಮಿತಿ ಆದಷ್ಟು ಬೇಗನೆ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಪ್ರಕಟಿಸುವಂತೆ ವಿನಂತಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News