ಕ್ಯಾಲಿಫೋರ್ನಿಯ: ಪಂಜಾಬ್ ವ್ಯಕ್ತಿಯ ಇರಿದು ಕೊಲೆ

Update: 2017-05-07 13:50 GMT

ಮೋಡೆಸ್ಟೊ (ಅಮೆರಿಕ), ಮೇ 7: ಶಂಕಿತ ದ್ವೇಷಾಪರಾಧ ಪ್ರಕರಣವೊಂದರಲ್ಲಿ, 32 ವರ್ಷದ ಪಂಜಾಬ್ ರಾಜ್ಯದ ನಿವಾಸಿಯೊಬ್ಬರನ್ನು ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ಮೋಡೆಸ್ಟೊ ನಗರದ ಅಂಗಡಿಯೊಂದರ ಹೊರಗೆ ಶುಕ್ರವಾರ ಇರಿದು ಕೊಲ್ಲಲಾಗಿದೆ.

ಮೃತ ಜಗ್ಜೀತ್ ಸಿಂಗ್ ಕಿರಾಣಿ ಅಂಗಡಿಯ ನೌಕರನಾಗಿದ್ದಾರೆ.

ಜಗ್ಜೀತ್ ಸಿಂಗ್ ಒಂದು ವರ್ಷದ ಹಿಂದೆ ಅಮೆರಿಕ್ಕಕೆ ತೆರಳಿದ್ದು, ಮೋಡೆಸ್ಟೊ ನಗರದಲ್ಲಿ ತನ್ನ ಸಹೋದರಿ ಮತ್ತು ಬಾವನೊಂದಿಗೆ ವಾಸಿಸುತ್ತಿದ್ದರು.

ಅವರು ತನ್ನ ಪತ್ನಿ ಕುಲ್ಜೀತ್ ಕೌರ್ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರು ಪಂಜಾಬ್‌ನ ಕಪುರ್ತಲದಲ್ಲಿ ವಾಸಿಸುತ್ತಿದ್ದಾರೆ. ಅವರ ಇಬ್ಬರು ತಂಗಿಯರು ಮತ್ತು ಓರ್ವ ಅಣ್ಣ ಫ್ರಾನ್ಸ್‌ನಲ್ಲಿ ನೆಲೆಸಿದ್ದಾರೆ.

ಅಮೆರಿಕನ್ ರಾಷ್ಟ್ರೀಯನಂತೆ ಕಾಣುವ ವ್ಯಕ್ತಿಯೊಬ್ಬ ಶುಕ್ರವಾರ ರಾತ್ರಿ ಸುಮಾರು 11.30ಕ್ಕೆ ಅಂಗಡಿಗೆ ಬಂದು ಒಂದು ಪ್ಯಾಕ್ ಸಿಗರೆಟ್ ಕೇಳಿದನು ಎನ್ನಲಾಗಿದೆ. ಆದರೆ, ಸಿಗರೆಟ್ ಮಾರಾಟಕ್ಕೆ ಅಗತ್ಯವಾದ ಗುರುತು ಚೀಟಿಯನ್ನು ಗ್ರಾಹಕ ನೀಡದಿದ್ದಾಗ ಸಿಗರೆಟ್ ಹಸ್ತಾಂತರಿಸಲು ಜಗ್ಜೀತ್ ಸಿಂಗ್ ನಿರಾಕರಿಸಿದರು ಎನ್ನಲಾಗಿದೆ.

ಇದರಿಂದ ಕೋಪಗೊಂಡ ವ್ಯಕ್ತಿ ಜನಾಂಗೀಯ ನಿಂದನೆಗೈದು ಹಾಗೂ ಇದರ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಬೆದರಿಕೆ ಹಾಕಿ ಹೊರಗೆ ಹೊರಟನು. ಈ ಘಟನೆಯು ಅಂಗಡಿಯಲ್ಲಿರುವ ಸಿಸಿಟಿವ ಕ್ಯಾಮರದಲ್ಲಿ ದಾಖಲಾಗಿದೆ.

ಕೆಲವು ನಿಮಿಷಗಳ ಬಳಿಕ ಜಗ್ಜೀತ್ ಹೊರಗೆ ಹೋದಾಗ ಅವರನ್ನು ಹರಿತ ಆಯುಧದಿಂದ ಇರಿಯಲಾಯಿತು. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಅವರು ಕೊನೆಯುಸಿರೆಳೆದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News