ನಾಳೆಯಿಂದ ಕರಾಚಿ-ಮುಂಬೈ ವಿಮಾನ ಹಾರಾಟವಿಲ್ಲ

Update: 2017-05-07 14:06 GMT

ಇಸ್ಲಾಮಾಬಾದ್, ಮೇ 7: ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ತನ್ನ ಕರಾಚಿ ಮತ್ತು ಮುಂಬೈ ನಡುವಿನ ವಿಮಾನವನ್ನು ವಾಣಿಜ್ಯಿಕ ಕಾರಣಗಳಿಗಾಗಿ ಸೋಮವಾರ (ಮೇ 8)ದಿಂದ ಸ್ಥಗಿತಗೊಳಿಸಲಿದೆ ಎಂದು ಏರ್‌ಲೈನ್ಸ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕರಾಚಿ-ಮುಂಬೈ ಮಾರ್ಗದಲ್ಲಿ ಪಿಐಎ ವಾರಕ್ಕೆ ಎರಡು ದಿನ (ಸೋಮವಾರ ಮತ್ತು ಗುರುವಾರ) ವಿಮಾನಗಳನ್ನು ಹಾರಿಸುತ್ತಿತ್ತು.

ಆದಾಗ್ಯೂ, ಪಿಐಎಯ ಲಾಹೋರ್-ದಿಲ್ಲಿ ಮಾರ್ಗದ ನಿರ್ವಹಣೆ ತೃಪ್ತಿದಾಯಕವಾಗಿರುವುದರಿಂದ ಹಾರಾಟ ಮುಂದುವರಿಯಲಿದೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದರು.

ಕರಾಚಿ-ಮುಂಬೈ ಮಾರ್ಗವನ್ನು ಸ್ಥಗಿತಗೊಳಿಸಿರುವುದರಿಂದ ಲಾಹೋರ್-ದಿಲ್ಲಿ ಮಾರ್ಗಕ್ಕೆ ಹೆಚ್ಚಿನ ಬೇಡಿಕೆಯುಂಟಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

‘‘ಕಳೆದ ಸುಮಾರು 6 ತಿಂಗಳಿನಿಂದ ಈ ಮಾರ್ಗದಲ್ಲಿ ನಾವು ಆರ್ಥಿಕ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದ ವಿಮಾನ ಹಾರಾಟವನ್ನು ರದ್ದುಪಡಿಸುವ ನಿರ್ಧಾರಕ್ಕೆ ನಾವು ಬಂದಿದ್ದೇವೆ’’ ಎಂದು ಅಧಿಕಾರಿ ಹೇಳಿದರು.

ಈ ಮೊದಲು, ಮೇ 11ರಿಂದ ಈ ಮಾರ್ಗದಲ್ಲಿ ಹಾರಾಟ ಸ್ಥಗಿತಗೊಳಿಸಲಾಗುವುದು ಎಂಬ ವರದಿಗಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News