305 ಪ್ರಯಾಣಿಕರ ಜೀವ ಪಣಕ್ಕಿಟ್ಟು ನಿದ್ರಿಸಿದ ಪಾಕ್ ಪೈಲಟ್ !

Update: 2017-05-07 14:09 GMT

ಇಸ್ಲಾಮಾಬಾದ್, ಮೇ 7: ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ)ನ ಇಸ್ಲಾಮಾಬಾದ್-ಲಂಡನ್ ವಿಮಾನದ ಪೈಲಟ್ ಎರಡೂವರೆ ಗಂಟೆಗಳ ಕಾಲ ನಿದ್ರಿಸಿ ಪ್ರಯಾಣಿಕರ ಜೀವಗಳನ್ನು ಅಪಾಯಕ್ಕೊಡ್ಡಿದ ಘಟನೆಯೊಂದು ವರದಿಯಾಗಿದೆ.

ಈ ಬಗ್ಗೆ ಕ್ರಮ ತೆಗೆದುಕೊಂಡಿರುವ ವಿಮಾನಯಾನ ಸಂಸ್ಥೆ ಪೈಲಟ್ ಅಮೀರ್ ಅಖ್ತರ್ ಹಶ್ಮಿಯನ್ನು ಕರ್ತವ್ಯದಿಂದ ಹೊರಗಿಟ್ಟಿದೆ.

ಈ ಘಟನೆ ಎಪ್ರಿಲ್‌ನಲ್ಲಿ ನಡೆದಿದೆ. ವಿಮಾನ ಹಾರಾಟ ಆರಂಭಿಸಿದ ಕೂಡಲೇ ವಿಮಾನದ ನಿಯಂತ್ರಣವನ್ನು ತರಬೇತಿ ಪಡೆಯುತ್ತಿರುವ ಪೈಲಟ್‌ನಿಗೆ ಒಪ್ಪಿಸಿ ಅಖ್ತರ್ ಪ್ರಯಾಣಿಕರ ವಿಭಾಗದಲ್ಲಿ ನಿದ್ದೆ ಹೊಡೆದರು ಎಂದು ‘ಡಾನ್’ ವರದಿ ಮಾಡಿದೆ. ಅವರ ಈ ವರ್ತನೆಯು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 305 ಪ್ರಯಾಣಿಕರ ಜೀವಗಳನ್ನು ಅಪಾಯಕ್ಕೊಡ್ಡಿತ್ತು.

ಅತ್ಯಂತ ಪ್ರಭಾವಿ ಪಾಕಿಸ್ತಾನ್ ಏರ್‌ಲೈನ್ಸ್ ಪೈಲಟ್ಸ್ ಅಸೋಸಿಯೇಶನ್ (ಪಿಎಎಲ್‌ಪಿಎ)ನ ಮಾಜಿ ಅಧ್ಯಕ್ಷರಾಗಿರುವ ಹಶ್ಮಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಆರಂಭದಲ್ಲಿ ಏರ್‌ಲೈನ್ಸ್ ನಿರಾಕರಿಸಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ‘ಡಾನ್’ ವರದಿ ಮಾಡಿದೆ. ಆದರೆ, ಬಳಿಕ, ‘‘ಮೇಲಿನಿಂದ ಬಂದ ಒತ್ತಡಕ್ಕೆ ತಲೆಬಾಗಿತು’’ ಎಂದಿದೆ.

ತನಿಖೆ ನಡೆಯುತ್ತಿರುವುದರಿಂದ ಹಶ್ಮಿಯನ್ನು ವಿಮಾನ ಹಾರಾಟ ಕೆಲಸದಿಂದ ಹೊರಗಿಡಲಾಗಿದೆ ಎಂದು ಪಿಐಎ ವಕ್ತಾರ ದನ್ಯಾಲ್ ಗಿಲಾನಿ ‘ಡಾನ್’ಗೆ ತಿಳಿಸಿದರು.

ಎಪ್ರಿಲ್ 26ರಂದು ಇಸ್ಲಾಮಾಬಾದ್‌ನಿಂದ ಲಂಡನ್‌ಗೆ ಹೊರಟ ಪಿಕೆ-785 ವಿಮಾನದ ಹಾರಾಟ ಉಸ್ತುವಾರಿಯನ್ನು ಹಶ್ಮಿ ವಹಿಸಿದ್ದರು. ಅವರ ಸಹಾಯಕರಾಗಿ ಫಸ್ಟ್ ಆಫಿಸರ್ ಅಲಿ ಹಸನ್ ಯಾಝ್ದನಿ ಇದ್ದರು.

ತರಬೇತಿ ಪಡೆಯುತ್ತಿದ್ದ ಇನ್ನೋರ್ವ ಫಸ್ಟ್ ಆಫಿಸರ್ ಮುಹಮ್ಮದ್ ಅಸಾದ್ ಅಲಿ ಕೂಡ ಕಾಕ್‌ಪಿಟ್‌ನಲ್ಲಿದ್ದರು. ಆ ವಿಮಾನ ಹಾರಾಟದ ವೇಳೆ, ಅಲಿ ಹಸನ್‌ಗೆ ಹಶ್ಮಿ ತರಬೇತಿ ನೀಡಬೇಕಾಗಿತ್ತು. ‘‘ಆದರೆ, ಅವರು ತನ್ನ ಕರ್ತವ್ಯ ನಿರ್ವಹಿಸುವ ಬದಲು ಗಡದ್ದಾಗಿ ನಿದ್ದೆ ಹೋದರು’’ ಎಂದು ಪತ್ರಿಕೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News