ಬ್ರಿಟನ್: ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಹಿಂದೂಜಾ ಪ್ರಥಮ
ಲಂಡನ್, ಮೇ 7: ‘ಸಂಡೇ ಟೈಮ್ಸ್’ ತಯಾರಿಸಿದ ಬ್ರಿಟನ್‌ನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಹಿಂದೂಜಾ ಸಹೋದರರಾದ ಶ್ರೀಚಂದ್ ಮತ್ತು ಗೋಪಿಚಂದ್ ಉಳಿಸಿಕೊಂಡಿದ್ದಾರೆ. ಹಿಂದೂಜಾ ಸಹೋದರರು ಲೇವಾದೇವಿ, ಆಸ್ತಿ ವ್ಯಾಪಾರ, ತೈಲ ಮತ್ತು ಪ್ಲಾಸ್ಟಿಕ್ ಉದ್ದಿಮೆ ನಡೆಸುತ್ತಿದ್ದಾರೆ.
ಈ ವರ್ಷದ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಬಿಲಿಯಾಧೀಶರು ಸೇರ್ಪಡೆಗೊಂಡಿದ್ದಾರೆ ಎಂದು ಪತ್ರಿಕೆ ಪ್ರಕಟಿಸಿದೆ.
‘‘ನಮ್ಮ 29ನೆ ವರ್ಷದ ಪಟ್ಟಿಯ ಪ್ರಕಾರ, ಈ ವರ್ಷದ 500 ಅತ್ಯಂತ ಶ್ರೀಮಂತ ವ್ಯಕ್ತಿಗಳು ಮತ್ತು ಕುಟುಂಬಗಳು 2016ರ ಮೊದಲ 1000 ಶ್ರೀಮಂತರಿಗಿಂತ ಹೆಚ್ಚಿನ ಸಂಪತ್ತು ಹೊಂದಿದ್ದಾರೆ’’ ಎಂದಿದೆ.
ಈ ಬಾರಿಯ 1000 ವ್ಯಕ್ತಿ ಮತ್ತು ಕುಟುಂಬಗಳ ಪಟ್ಟಿಗೆ ಸೇರ್ಪಡೆಗೊಂಡವರ ಆದಾಯ 110 ಮಿಲಿಯ ಪೌಂಡ್‌ನಿಂದ ಆರಂಭವಾಗುತ್ತದೆ. ಇದು 2009ರ ಪಟ್ಟಿಯ ಕನಿಷ್ಠ ಆದಾಯಕ್ಕಿಂತ ದ್ವಿಗುಣವಾಗಿದೆ.
‘‘ಬ್ರಿಟನ್‌ನಲ್ಲಿ 134 ಬಿಲಿಯಾಧೀಶರಿದ್ದಾರೆ. ಅವರ ಪೈಕಿ ಅತ್ಯುನ್ನತ ಸ್ಥಾನದಲ್ಲಿರುವವರು ಶ್ರೀ ಮತ್ತು ಗೋಪಿ ಹಿಂದೂಜಾ. ಈ ಭಾರತ ಸಂಜಾತ ಸಹೋದರರ ಸಂಪತ್ತು 16.2 ಬಿಲಿಯ ಪೌಂಡ್ (ಸುಮಾರು 1,35,271 ಕೋಟಿ ರೂಪಾಯಿ). ಇದು ಕಳೆದ ವರ್ಷಕ್ಕಿಂತ 320 ಕೋಟಿ ಪೌಂಡ್ (26,720 ಕೋಟಿ ರೂಪಾಯಿ)ನಷ್ಟು ಹೆಚ್ಚು’’ ಎಂದು ಪತ್ರಿಕೆ ಹೇಳಿದೆ.
ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಮತ್ತು ಕುಟುಂಬ ಪಟ್ಟಿಯಲ್ಲಿ ನಾಲ್ಕನೆ ಸ್ಥಾನವನ್ನು ಹೊಂದಿದ್ದಾರೆ. ಅವರ ಸಂಪತ್ತು 13.229 ಬಿಲಿಯ ಪೌಂಡ್ (1,10,463 ಕೋಟಿ ರೂಪಾಯಿ). ಕಳೆದ 12 ತಿಂಗಳ ಅವಧಿಯಲ್ಲಿ ಅವರು ತಮ್ಮ ಸಂಪತ್ತಿಗೆ 6 ಬಿಲಿಯ ಪೌಂಡ್ (ಸುಮಾರು 50,100 ಕೋಟಿ ರೂಪಾಯಿ) ಸೇರ್ಪಡೆಗೊಳಿಸಿದ್ದಾರೆ.