×
Ad

ಮೊಸುಲ್: ಆಹಾರದ ತೀವ್ರ ಅಭಾವ ; ಹಸಿರು ಕಾಯಿಗಳನ್ನು ತಿಂದು ಬದುಕುತ್ತಿರುವ ಜನರು

Update: 2017-05-07 19:56 IST

ಮೊಸುಲ್ (ಇರಾಕ್), ಮೇ 7: ಮೊಸುಲ್‌ನ ಭಯೋತ್ಪಾದಕರ ವಶದಲ್ಲಿರುವ ಹಾಗೂ ಇತ್ತೀಚೆಗೆ ಭದ್ರತಾಪಡೆಗಳ ನಿಯಂತ್ರಣಕ್ಕೆ ಬಂದಿರುವ ಪ್ರದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ನಾಗರಿಕರು ಆಹಾರದ ತೀವ್ರ ಅಭಾವವನ್ನು ಎದುರಿಸುತ್ತಿದ್ದಾರೆ.

ಪಶ್ಚಿಮ ಮೊಸುಲ್‌ನ ಮಹತ್ತ ಉಪನಗರದಲ್ಲಿ ಆಶ್ರಯ ಪಡೆದುಕೊಂಡಿರುವ ಅಲಿಯಾ ಹುಸೈನ್ ಮತ್ತು ಆಕೆಯ 25 ಕುಟುಂಬ ಸದಸ್ಯರು ಅವರ ಮನೆಯ ಪಕ್ಕದಲ್ಲಿ ಬೆಳೆಯುತ್ತಿರುವ ಹಸಿರು ಕಾಯಿಗಳನ್ನು ತಿಂದು ಬದುಕುತ್ತಿದ್ದಾರೆ.

ಮೊಸುಲ್‌ನಿಂದ ಐಸಿಸ್ ಉಗ್ರರನ್ನು ಹೊರಹಾಕುವ ಕಾರ್ಯಾಚರಣೆ ಈಗಲೂ ನಿಧಾನಗತಿಯಲ್ಲಿ ನಡೆಯುತ್ತಿದೆ. ಹಾಗಾಗಿ, ಬಂಡುಕೋರ ನಿಯಂತ್ರಣದ ಹಾಗೂ ಇತ್ತೀಚೆಗೆ ಸೇನೆ ವಶಪಡಿಸಿಕೊಂಡಿರುವ ಪ್ರದೇಶಗಳಿಗೆ ಆಹಾರ ಪೂರೈಕೆಗಳು ಬರುತ್ತಿಲ್ಲ.

ಹುಸೇನ್ ವಾಸಿಸುತ್ತಿರುವ ಪ್ರದೇಶ ತಾಂತ್ರಿಕವಾಗಿ ಸೇನೆಯ ನಿಯಂತ್ರಣದಲ್ಲಿದೆಯಾದರೂ, ಅದು ಈಗಲೂ ಅತ್ಯಂತ ಅಪಾಯಕರ ಸ್ಥಳವಾಗಿದೆ ಹಾಗೂ ಅಲ್ಲಿಗೆ ತಲುಪಲು ನೆರವು ಗುಂಪುಗಳು ಹಿಂಜರಿಯುತ್ತಿವೆ.

ಕೆಲವು ಕುಟುಂಬಗಳು ಹಲವು ಕಿಲೋಮೀಟರ್ ನಡೆದು ಮಾರುಕಟ್ಟೆಗಳನ್ನು ತಲುಪುತ್ತಿದ್ದಾರೆ. ಆದರೆ, ಅಲ್ಲಿ ಅಗತ್ಯ ವಸ್ತುಗಳ ದರ ಅತ್ಯಂತ ದುಬಾರಿಯಾಗಿದೆ. ಹೆಚ್ಚಿನ ಕುಟುಂಬಗಳು ತಮ್ಮ ಸಂಪಾದನೆಗಳನ್ನು ಈಗಾಗಲೇ ಖರ್ಚು ಮಾಡಿ ಮುಗಿಸಿವೆ. ಹಾಗೂ ಮೊಸುಲ್‌ನಲ್ಲಿ ಯಾವುದೇ ಉದ್ಯೋಗವಿಲ್ಲ.

ಐಸಿಸ್ ನಿಯಂತ್ರಣದ ಪ್ರದೇಶಗಳಲ್ಲಿ ಈಗಲೂ 3 ಲಕ್ಷದಿಂದ 5 ಲಕ್ಷ ಜನರು ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ತಲುಪಲು ಯಾರಿಗೂ ಸಾಧ್ಯವಾಗುತ್ತಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ. ಅಲ್ಲಿನ ನಿವಾಸಿಗಳಿಗೆ ಆರು ತಿಂಗಳಿನಿಂದ ಆಹಾರ ಧಾನ್ಯಗಳ ಪೂರೈಕೆ ಸ್ಥಗಿತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News