ಉ.ಪ್ರದೇಶ: ಮದುವೆ ಮೆರವಣಿಗೆಯ ಮೇಲೆ ಮೇಲ್ಜಾತಿಗಳ ಜನರಿಂದ ದಾಳಿ,ಓರ್ವ ಸೆರೆ

Update: 2017-05-07 14:48 GMT

ಛತ್ತರ್‌ಪುರ,ಮೇ 7: ತನ್ನ ಮದುವೆ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಿದ್ದಕ್ಕಾಗಿ ಮದುಮಗ ಮತ್ತು ದಿಬ್ಬಣದ ಇತರ ಸದಸ್ಯರನ್ನು ಕೆಲವು ಮೇಲ್ಜಾತಿಗಳ ಜನರು ಥಳಿಸಿದ ಘಟನೆ ಬುಂದೇಲಖಂಡದ ಛತ್ತರ್‌ಪುರ ಜಿಲ್ಲೆಯ ದೆಹ್ರಿ ಗ್ರಾಮದಲ್ಲಿ ನಡೆದಿದೆ.

ಹಲ್ಲೆಯಿಂದ ದಿಬ್ಬಣದಲ್ಲಿದ್ದ ಐವರು ಗಾಯಗೊಂಡಿದ್ದಾರೆ. ನಾಲ್ವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದು, ಇತರ ಮೂವರು ತಲೆಮರೆಸಿಕೊಂಡಿದ್ದಾರೆ.

ಶುಕ್ರವಾರ ರಾತ್ರಿ ದೆಹ್ರಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಸಂತಾ ಬಸರ್‌ಳ ವಿವಾಹ ಮಹಾರಾಜಪುರ ಗ್ರಾಮದ ಪ್ರಕಾಶ ಬಸರ್ ಜೊತೆಗೆ ಏರ್ಪಾಡಾಗಿತ್ತು. ವರನ ದಿಬ್ಬಣ ರಾತ್ರಿ 11 ಗಂಟೆಗೆ ಬರುವುದು ನಿಗದಿಯಾಗಿತ್ತು. ವರ ನವಿಲಿನ ರೂಪದಲ್ಲಿ ಅಲಂಕೃತ ಜೀಪಿನಲ್ಲಿ ಕುಳಿತು ಸಾಗುತ್ತಿದ್ದ. ದಾರಿಯಲ್ಲಿ ಎದುರಾದ ಆರೋಪಿಗಳು ದಲಿತರು ವೈಭವದ ಮೆರವಣಿಗೆ ನಡೆಸುತ್ತಿರುವುದನ್ನು ಆಕ್ಷೇಪಿಸಿ ಥಳಿಸಿದ್ದಾರೆ ಎಂದು ಓರ್ಚಾ ರೋಡ್ ಪೊಲೀಸ್ ಠಾಣಾಧಿಕಾರಿ ರಾಮೇಶ್ವರ ದಯಾಳ್ ತಿಳಿಸಿದರು. ಆರೋಪಿಗಳು ಫೋಟೊಗ್ರಾಫರ್‌ನ ಕ್ಯಾಮರಾವನ್ನು ಪುಡಿಗೈದು ಇತರರಿಗೆ ಬೆದರಿಕೆಯನ್ನೂ ಒಡ್ಡಿದ್ದರು. ಮದುವೆ ಸಮಾರಂಭ ಮುಗಿಯುವವರೆಗೂ ಪೊಲೀಸರು ಅಲ್ಲಿಯೇ ಇದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News