ಹತ ಬಂಡುಕೋರನ ಅಂತ್ಯಸಂಸ್ಕಾರದಲ್ಲಿ ಉಗ್ರರ ಗುಂಪಿನಿಂದ ‘ಗನ್ ಸೆಲ್ಯೂಟ್’
ಶ್ರೀನಗರ,ಮೇ 7: ಶನಿವಾರ ಸಂಜೆ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ ಬಂಡುಕೋರ, ಕಾಶ್ಮೀರದ ಕುಲ್ಗಾಂಮ್ ಜಿಲ್ಲೆಯ ನಿವಾಸಿ ಫಯಾಝ್ ಅಹ್ಮದ್ ಅಲಿಯಾಸ್ ಸೇಠಾನ ಅಂತ್ಯಸಂಸ್ಕಾರ ರವಿವಾರ ನಡೆದ ಸಂದರ್ಭದಲ್ಲಿ ಉಗ್ರರ ಗುಂಪೊಂದು ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿ ‘ಗನ್ ಸೆಲ್ಯೂಟ್’ ನೀಡಿದೆ.
ತಮ್ಮ ಹತ ಸಹಚರರ ಅಂತ್ಯಸಂಸ್ಕಾರಗಳಲ್ಲಿ ಉಗ್ರರು ಹಾಜರಿದ್ದ ಹಿಂದಿನ ನಿದರ್ಶನಗಳಿವೆ. ಆದರೆ ಗುರುವಾರದಿಂದ 4,000 ಭದ್ರತಾ ಸಿಬ್ಬಂದಿಗಳು, ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳು ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರಿಗಾಗಿ ಕಳೆದೊಂದು ದಶಕದಲ್ಲಿಯೇ ಬೃಹತ್ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿರುವ ಹಿನ್ನಲೆಯಲ್ಲಿ ಅಂತ್ಯಸಂಸ್ಕಾರದಲ್ಲಿ ಉಗ್ರರ ಹಾಜರಿ ಅಚ್ಚರಿ ಮೂಡಿಸಿದೆ.
ಶನಿವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯ ಮೀರ್ ಬಜಾರ್ ಪ್ರದೇಶದಲ್ಲಿ ಪೊಲೀಸ್ ತಂಡವೊಂದರ ಮೇಲೆ ಉಗ್ರರು ದಾಳಿ ನಡೆಸಿದ್ದು,ನಂತರದ ಗುಂಡಿನ ಕಾಳಗದಲ್ಲಿ ಅಹ್ಮದ್ ಹತನಾಗಿದ್ದ. ಮೂವರು ನಾಗರಿಕರು ಮತ್ತು ಓರ್ವ ಪೊಲೀಸ್ ಕೂಡ ಬಲಿಯಾಗಿದ್ದರು.
ಅಂತ್ಯಸಂಸ್ಕಾರಕ್ಕೆ ಸೇರಿದವರ ಪೈಕಿ ಕನಿಷ್ಠ ನಾಲ್ವರು ಉಗ್ರರ ಗುಂಪೊಂದು ತಮ್ಮ ಸ್ವಯಂಚಾಲಿತ ಬಂದೂಕುಗಳಿಂದ ಗಾಳಿಯಲ್ಲಿ ಗುಂಡುಗಳನ್ನು ಹಾರಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಪೊಲೀಸರು ಈ ಉಗ್ರರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿ ಯೋರ್ವರು ತಿಳಿಸಿದರು. ಅಹ್ಮದ್ ಎನ್‌ಐಎಗೆ ಅಪೇಕ್ಷಿತ ಉಗ್ರನಾಗಿದ್ದು, ತನ್ನ ತಲೆಯ ಮೇಲೆ ಎರಡು ಲಕ್ಷ ರೂ.ಗಳ ಬಹುಮಾನವನ್ನು ಹೊತ್ತಿದ್ದ. ಇಬ್ಬರು ಬಿಎಸ್‌ಎಫ್ ಯೋಧರು ಮತ್ತು ಓರ್ವ ಉಗ್ರ ಕೊಲ್ಲಲ್ಪಟ್ಟಿದ್ದ ಆಗಸ್ಟ್ 2015ರ ಉಧಮಪುರ ಎನ್ ಕೌಂಟರ್ ಬಳಿಕ ಈತನ ಹೆಸರು ಕೇಳಿ ಬಂದಿತ್ತು.
ಇದೇ ವೇಳೆ ಶನಿವಾರ ಉಗ್ರರೊಂದಿಗೆ ಕೆಚ್ಚಿನೊಂದಿಗೆ ಕಾದಾಡಿ ಹುತಾತ್ಮರಾದ ಕಾನ್‌ಸ್ಟೇಬಲ್ ಮೆಹಮೂದ್ ಅಹ್ಮದ್ ಶೇಖ್ (38) ಅವರ ಅಂತಿಮ ಸಂಸ್ಕಾರವು ರವಿವಾರ ಕುಲ್ಗಾಮ್‌ನಲ್ಲಿ ನಡೆಯಿತು.