×
Ad

ಉದ್ಯಾನನಗರಿಯಲ್ಲಿ ಕೆಕೆಆರ್ ಗೆಲುವಿನ ಕೇಕೆ

Update: 2017-05-07 22:48 IST

ಬೆಂಗಳೂರು, ಮೇ 7: ಕೋಲ್ಕತಾ ನೈಟ್ ರೈಡರ್ಸ್‌ ತಂಡ ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ 46ನೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 6 ವಿಕೆಟ್‌ಗಳ ಜಯ ಗಳಿಸಿದೆ.
ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 159 ರನ್‌ಗಳ ಸವಾಲನ್ನು ಪಡೆದ ಕೋಲ್ಕತಾ ತಂಡ ಇನ್ನೂ 29 ಎಸೆತಗಳನ್ನು ಬಾಕಿ ಉಳಿಸಿ 4 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸೇರಿಸಿತು.
ಇದರೊಂದಿಗೆ ಆರ್‌ಸಿಬಿ ಈ ಆವೃತ್ತಿಯ ಐಪಿಎಲ್‌ನಲ್ಲಿ 10ನೆ ಸೋಲು ದಾಖಲಿಸುವ ಮೂಲಕ ಕೆಟ್ಟ ಪ್ರದರ್ಶನ ನೀಡಿದೆ.
  ಆರಂಭಿಕ ದಾಂಡಿಗ ಸುನೀಲ್ ನರೇನ್ ವೇಗದ ಅರ್ಧಶತಕ,ಆಲ್‌ರೌಂಡ್ ಪ್ರದರ್ಶನ ಮತ್ತು ಕ್ರಿಸ್ ಲಿನ್ ಅರ್ಧಶತಕದ ನೆರವಿನಲ್ಲಿ ಕೋಲ್ಕತಾ ಸುಲಭವಾಗಿ ಗೆಲುವಿನ ದಡ ಸೇರಿತು. ಆಲ್‌ರೌಂಡ್ ಪ್ರದರ್ಶನ ನೀಡಿದ ಸುನೀಲ್ ನರೇನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು..
ನರೇನ್ ಮತ್ತು ಲಿನ್ ಮೊದಲ ವಿಕೆಟ್‌ಗೆ 6.1 ಓವರ್‌ಗಳಲ್ಲಿ 105 ರನ್ ಸೇರಿಸಿದರು. ನರೇನ್ 7ನೆ ಓವರ್‌ನ ಮೊದಲ ಎಸೆತದಲ್ಲಿ ಜಾಧವ್‌ಗೆ ಕ್ಯಾಚ್ ನೀಡಿದರು.
ನರೇನ್ 17 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಲ್ಲಿ 54 ರನ್ ಗಳಿಸಿದರು. ಲಿನ್ 22 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 50 ರನ್ ಗಳಿಸಿ ಪವನ್ ನೇಗಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
  ಗ್ರಾಂಡ್‌ಹೊಮೆ 31 ರನ್ ಮತ್ತು ನಾಯಕ ಗೌತಮ್ ಗಂಭೀರ್ 14ರನ್ ಗಳಿಸಿ ಔಟಾದರು.ಮನೀಷ್ ಪಾಂಡೆ ಔಟಾಗದೆ 4ರನ್ ಗಳಿಸಿದರು.
ಆರ್‌ಸಿಬಿಯ ಪವನ್ ನೇಗಿ 21ಕ್ಕೆ 2 ವಿಕೆಟ್ ಮತ್ತು ಚೌಧರಿ 1 ವಿಕೆಟ್ ಹಂಚಿಕೊಂಡರು.
 ಆರ್‌ಸಿಬಿ 158/6: ಇದಕ್ಕೂ ಮೊದಲು ಮಳೆ ಬಾಧಿತ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 158 ರನ್ ಗಳಿಸಿತ್ತು.
ಆರಂಭಿಕ ದಾಂಡಿಗ ಕ್ರಿಸ್ ಗೇಲ್ (0) ಮತ್ತು ನಾಯಕ ವಿರಾಟ್ ಕೊಹ್ಲಿ(5) ಕಳಪೆ ಪ್ರದರ್ಶನ ನೀಡಿದರೂ , ಮನ್‌ದೀಪ್ ಮತ್ತು ಟ್ರಾವಿಸ್ ಹೆಡ್ ಅವರ ಉಪಯುಕ್ತ ಕೊಡುಗೆ ನೆರವಿನಲ್ಲಿ ಆರ್‌ಸಿಬಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.

ಮನ್‌ದೀಪ್ ಸಿಂಗ್ 52 ರನ್(43ಎ, 4ಬೌ,1ಸಿ)ಮತ್ತು ಹೆಡ್ ಔಟಾಗದೆ 75 ರನ್(47ಎ, 3ಬೌ, 5ಸಿ) ಗಳಿಸಿದರು. ಜಾಧವ್ 8 ರನ್ ಮತ್ತು ಪವನ್ ನೇಗಿ 5ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News