ಅಮೆರಿಕದಲ್ಲಿ ಭಾರತೀಯ ಮೂಲದ ವೈದ್ಯನ ಗುಂಡಿಕ್ಕಿ ಹತ್ಯೆ
ವಾಷಿಂಗ್ಟನ್, ಮೇ 8: ಭಾರತೀಯ ಮೂಲದ 32 ವರ್ಷದ ವೈದ್ಯರೊಬ್ಬರನ್ನು ಅಮೆರಿಕದ ಮಿಚಿಗನ್ ನಲ್ಲಿ ಅವರ ಕಾರಿನೊಳಗೆ ಗುಂಡಿಕ್ಕಿ ಸಾಯಿಸಲಾಗಿದೆ.
ಹೆನ್ರಿಫೋರ್ಡ್ ಆಸ್ಪತ್ರೆಯ ಯುರಾಲಜಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ರಾಕೇಶ್ ಕುಮಾರ್ ಡೆಟ್ರಾಯಿಟ್ ನಿಂದ 90 ಕಿ.ಮೀ. ದೂರದ ಪ್ರದೇಶದಲ್ಲಿ ಕಾರಿನೊಳಗೆ ಸತ್ತು ಬಿದ್ದಿರುವುದು ಕಂಡುಬಂದಿದೆ. ಅವರ ಸಾವಿಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ತಮಗೆ ಯಾರ ಮೇಲೂ ಸಂಶಯವಿಲ್ಲ ಎಂದು ಅವರ ಕುಟುಂಬ ತಿಳಿಸಿದ್ದು, ಇದೊಂದು ದ್ವೇಷದ ಕೃತ್ಯವಾಗಿರಲಿಕ್ಕಿಲ್ಲ ಎಂದು ಅಂದಾಜಿಸಲಾಗಿದೆ.
ಕೊಚ್ಚಿಯ ಅಮೃತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ನಲ್ಲಿ ರಾಕೇಶ್ ವೈದ್ಯಕೀಯ ಪದವಿ ಪಡೆದಿದ್ದರು.
ರಾಕೇಶ್ ತಮ್ಮ ಕರ್ತವ್ಯಕ್ಕೆ ಹಾಜರಾಗದೇ ಇರುವುದನ್ನು ಕಂಡು ಅವರ ಸಹೋದ್ಯೋಗಿಗಳು ಅವರಿಗೆ ಕರೆ ಮಾಡಿದರೂ ಪ್ರತಿಕ್ರಿಯೆ ಇರಲಿಲ್ಲ. ನಂತರ ಅವರ ತಂದೆ, ಅಮೆರಿಕನ್ ಅಸೋಸಿಯೇಶನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಒರಿಜಿನ್ ಇದರ ಮಾಜಿ ಅಧ್ಯಕ್ಷ ನರೇಂದ್ರ ಕುಮಾರ್ ಅವರಿಗೆ ತಿಳಿಸಲಾಯಿತು. ಮಗನ ಮನೆಗೆ ಹೋದ ನರೇಂದ್ರ ಅವರು ಅಲ್ಲಿ ಆತ ಇರದೇ ಇರುವುದನ್ನು ಕಂಡು ಪೊಲೀಸರಿಗೆ ತಿಳಿಸಿದ್ದು ಬಹಳಷ್ಟು ಹುಡುಕಾಟದ ಬಳಿಕ ರೆಸ್ಟ್ ಏರಿಯಾದಲ್ಲಿದ್ದ ಕಾರಿನೊಳಗೆ ರಾಕೇಶ್ ಮೃತಪಟ್ಟಿರುವುದು ಕಂಡುಬಂದಿತ್ತು.