ಮೇವು ಹಗರಣ: ಪ್ರತ್ಯೇಕ ವಿಚಾರಣೆಗೆ ಸುಪ್ರೀಂ ಆದೇಶ

Update: 2017-05-08 14:02 GMT

ಹೊಸದಿಲ್ಲಿ, ಮೇ 8: ಮೇವು ಹಗರಣದ ಬಗ್ಗೆ ಪ್ರತ್ಯೇಕ ತನಿಖೆ ಎದುರಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿರುವುದರಿಂದ ಆರ್‌ಜೆಡಿ ನಾಯಕ ಲಾಲೂಪ್ರಸಾದ್ ಯಾದವ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಅಲ್ಲದೆ ಮೇವು ಹಗರಣದಲ್ಲಿ ನಡೆದಿದ್ದ ಪಿತೂರಿಯಲ್ಲಿ ಲಾಲೂ ಪ್ರಸಾದ್ ಒಳಗೊಂಡಿದ್ದರು ಎಂಬ ಆರೋಪವನ್ನು ಕೈಬಿಟ್ಟಿದ್ದ ಜಾರ್ಖಂಡ್ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.

  ಲಾಲೂಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಜಾನುವಾರುಗಳಿಗೆ ಮೇವು ಪೂರೈಸುವ ಯೋಜನೆಯಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ 900 ಕೋಟಿ ರೂ. ಮೊತ್ತದ ಅವ್ಯವಹಾರ ನಡೆದಿದ್ದು ಇದು ಮೇವು ಹಗರಣ ಎಂದೇ ಹೆಸರಾಗಿದೆ. ಈ ಹಗರಣದಲ್ಲಿ ಲಾಲೂ ವಿರುದ್ದ ದಾಖಲಾಗಿರುವ ನಾಲ್ಕೂ ಪ್ರಕರಣಗಳ ಪ್ರತ್ಯೇಕ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಆದೇಶಿಸಿದೆ. 9 ತಿಂಗಳೊಳಗೆ ವಿಚಾರಣೆ ಮುಗಿಸುವಂತೆ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ ಮತ್ತು ಅಮಿತವ ರಾಯ್ ಅವರನ್ನೊಳಗೊಂಡ ನ್ಯಾಯಾಲಯದ ಪೀಠವೊಂದು ತಿಳಿಸಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರ ಮತ್ತು ಬಿಹಾರ ಸರಕಾದ ಮಾಜಿ ಪ್ರಧಾನ ಕಾರ್ಯದರ್ಶಿ ಸಜಲ್ ಚಕ್ರವರ್ತಿ ಕೂಡಾ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಲಾಲೂ ಪ್ರಸಾದ್ ಒಂದು ಪ್ರಕರಣದಲ್ಲಿ ಆರೋಪಿ ಎಂದು ನ್ಯಾಯಾಲಯ ತೀರ್ಪು ನೀಡಿರುವ ಕಾರಣ, ಇದೇ ಹಗರಣದ ಇನ್ನುಳಿದ ಪ್ರಕರಣಗಳ ವಿಚಾರಣೆಯನ್ನು ಅದೇ ಸಾಕ್ಷಿಗಳ ಮೂಲಕ ನಡೆಸುವುದರಲ್ಲಿ ಅರ್ಥ ಇಲ್ಲ ಎಂದು ಹೇಳಿದ್ದ ಜಾರ್ಖಂಡ್ ಹೈಕೋರ್ಟ್, ಲಾಲೂ ವಿರುದ್ಧ ಸಲ್ಲಿಸಲಾಗಿದ್ದ ಇತರ ನಾಲ್ಕು ಪ್ರಕರಣಗಳ ವಿಚಾರಣೆಯನ್ನು ರದ್ದುಗೊಳಿಸಿತ್ತು. ಅಲ್ಲದೆ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲು ಸಿಬಿಐ ವಿಳಂಬ ಮಾಡಿದೆ ಎಂದೂ ತಿಳಿಸಿತ್ತು.

     ಇದನ್ನು ಪ್ರಶ್ನಿಸಿ ಸಿಬಿಐ 2014ರಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಯಾದವ್ ವಿರುದ್ಧ ಮೊಕದ್ದಮೆಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಮುಂದುವರಿಸಬೇಕೆಂದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್, ಎರಡು ಪ್ರಕರಣಗಳಲ್ಲಿ ವಿಚಾರಣೆ ಮುಂದುವರಿಸುವಂತೆ ಸೂಚಿಸಿತ್ತು . ಆದರೆ ಒಂದು ಅಪರಾಧದ ಬಗ್ಗೆ ಓರ್ವ ವ್ಯಕ್ತಿಯನ್ನು ಎರಡು ಬಾರಿ ಶಿಕ್ಷಿಸುವಂತಿಲ್ಲ ಎಂದು ತಿಳಿಸಿ ಉಳಿದ ಆರೋಪಗಳನ್ನು ಕೈಬಿಟ್ಟಿತ್ತು.

 ವಿಚಾರಣೆಯನ್ನು ಅನಗತ್ಯವಾಗಿ ವಿಳಂಬಗೊಳಿಸಲು ಯತ್ನಿಸುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ 2016ರ ನವೆಂಬರ್‌ನಲ್ಲಿ ಜಗನ್ನಾಥ್ ಮಿಶ್ರಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News