ನೇಮಕಾತಿ ನಿಯಮ ತಿದ್ದುಪಡಿ ವಿಳಂಬವಾದರೆ ಪ್ರತಿಭಟನೆ ಅನಿವಾರ್ಯ: ಶಿವಾನಂದ

Update: 2017-05-08 18:30 GMT

ಮಂಗಳೂರು, ಮೇ 8: ಸರಕಾರದ ವೃಂದ ಹಾಗೂ ನೇಮಕಾತಿ(ಸಿ ಆ್ಯಂಡ್ ಆರ್) ನಿಯಮಗಳಿಗೆ ಅಂತಿಮ ಅಧಿ ಸೂಚನೆ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ಪಶುವೈದ್ಯಕೀಯ ಸಂಘ ಮೇ 16ರಿಂದ ಪಶುವೈದ್ಯಕೀಯ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಅನಿ ವಾರ್ಯವಾಗಿ ಪ್ರತಿಭಟನೆ ಮಾಡಬೇಕಾದೀತು. ಆದರೆ ಪ್ರತಿಭಟನೆ ಯಾವ ರೀತಿ ಮಾಡುವುದು ಎನ್ನುವ ಬಗ್ಗೆ ಜಿಲ್ಲಾ ಮಟ್ಟ ದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ದ.ಕ. ಜಿಲ್ಲಾ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಶಿವಾನಂದ ಪತ್ರಿಕೆಗೆ ತಿಳಿಸಿದ್ದಾರೆ.

 ಕರ್ನಾಟಕ ಪಶು ವೈದ್ಯಕೀಯ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಕರ್ನಾಟಕ ಸರಕಾರದ ಪಶು ಸಂಗೋಪನಾ ಸಚಿವರು ನೀಡಿ ದ್ದರು. ಆದರೆ ಅವರು ನೀಡಿದ ಭರವಸೆಯ ಪ್ರಕಾರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅಂತಿಮ ಅಧಿ ಸೂಚನೆ ಇದುವರೆಗೂ ಜಾರಿಗೊಳಿಸದೆ ಇದ್ದ ಕಾರಣ ಮೇ 16ರಿಂದ ರಾಜ್ಯಾದ್ಯಂತ ಪಶು ವೈದ್ಯಕೀಯ ಸೇವೆ ಸ್ಥಗಿತ ಗೊಳಿಸಲಾಗುವುದು ಎಂದು ರಾಜ್ಯ ಸಂಘ ಕರೆ ನೀಡಿದೆ.

ಈ ಹಿಂದೆ ಎಪ್ರಿಲ್ 7ರೊಳಗೆ ಸರಕಾರ ಅಧಿಸೂಚನೆ ಹೊರ ಡಿಸದಿದ್ದರೆ ಕಾಲು ಬಾಯಿ ಜ್ವರದ ಸಾಮೂಹಿಕ ಲಸಿಕಾ ಕಾರ್ಯಕ್ರಮ ಬಹಿಷ್ಕರಿಸುವ ಎಚ್ಚರಿಕೆಯನ್ನು ನೀಡಿತ್ತು. ಆದರೆ ಈ ನಡುವೆ ರಾಜ್ಯದ ಪಶು ಸಂಗೋಪನಾ ಸಚಿವರು ಎಪ್ರಿಲ್ 14ರಂದು ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ಅಧಿಸೂಚನೆ ಹೊರಡಿಸುವುದಾಗಿ ಭರವಸೆ ನೀಡಿ ದ್ದರು.

 ಈ ಹಿನ್ನೆಲೆಯಲ್ಲಿ ಎಲ್ಲಾ ಪಶುವೈದ್ಯಕೀಯ ವೈದ್ಯರು ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆದರೆ ಇದುವರೆಗೂ ಈ ಭರವಸೆ ಕಾರ್ಯಗತಗೊಳ್ಳದೆ ಇದ್ದ ಹಿನ್ನೆಲೆಯಲ್ಲಿ ರಾಜ್ಯ ಸಂಘ ಮತ್ತೆ ಪ್ರತಿಭಟನೆ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದೆ.

ವೃಂದ ಹಾಗೂ ನೇಮಕಾತಿ ನಿಯಮಾವಳಿಗೆ ತಿದ್ದುಪಡಿಯಾಗಬೇಕು ಎನ್ನುವ ವಿಚಾರದಲ್ಲಿ ದ.ಕ. ಜಿಲ್ಲಾ ಸಂಘದ ಸಹಮತವಿದೆ. ಆದರೆ ಈ ಸಂಬಂಧ ಮೇ 16ರಂದು ರಾಜ್ಯ ಸಂಘ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಒಂದೆರಡು ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ತೀರ್ಮಾನಿಸಲಿದ್ದೇವೆ ಎಂದು ಜಿಲ್ಲಾ ಸಂಘದ ಅಧ್ಯಕ್ಷ ಡಾ. ಶಿವಾನಂದ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News