×
Ad

ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಗೋಸ್ವಾಮಿ

Update: 2017-05-09 21:50 IST

ಹೊಸದಿಲ್ಲಿ, ಮೇ 9: ಭಾರತದ ಮಾಜಿ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಜುಲನ್ ಗೋಸ್ವಾಮಿ ಮಹಿಳೆಯರ ಏಕದಿನ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮಹಿಳೆಯರ ಚತುಷ್ಕೋನ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ ಗೋಸ್ವಾಮಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದರು. ಗೋಸ್ವಾಮಿ 153 ಪಂದ್ಯಗಳಲ್ಲಿ 21.76ರ ಸರಾಸರಿಯಲ್ಲಿ 181 ರನ್ ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಆಸ್ಟ್ರೇಲಿಯದ ಕ್ಯಾಥರಿನ್ ಫಿಟ್ಜ್‌ಪ್ಯಾಟ್ರಿಕ್ ದಾಖಲೆಯನ್ನು ಮುರಿದರು.

2007ರ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್, 2010ರಲ್ಲಿ ಅರ್ಜುನ ಪ್ರಶಸ್ತಿ, 2012ರಲ್ಲಿ ಪದ್ಮಶ್ರೀ ಪ್ರಶಸ್ತಿಗಳನ್ನು ಜಯಿಸಿರುವ 34ರ ಹರೆಯದ ಗೋಸ್ವಾಮಿ ಮಹಿಳಾ ಕ್ರಿಕೆಟ್‌ನ ಅತ್ಯಂತ ವೇಗದ ಬೌಲರ್ ಆಗಿದ್ದಾರೆ. 2002ರಲ್ಲಿ ಚೊಚ್ಚಲ ಪಂದ್ಯ ಆಡಿರುವ ಗೋಸ್ವಾಮಿ ಭಾರತದ ಪ್ರಮುಖ ಆಟಗಾರ್ತಿಯಾಗಿದ್ದಾರೆ.

 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ(ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20) ಒಟ್ಟು 271 ವಿಕೆಟ್‌ಗಳನ್ನು ಸಂಪಾದಿಸಿರುವ ಗೋಸ್ವಾಮಿ ಮಹಿಳಾ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಆಗಿದ್ದಾರೆ. ಭಾರತದ ನಾಯಕಿಯಾಗಿಯೂ ತಂಡವನ್ನು ಮುನ್ನಡೆಸಿದ್ದರು.

 ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿರುವ ಗೋಸ್ವಾಮಿ ಬಾಲ್ಯದಲ್ಲಿ ಫುಟ್ಬಾಲ್ ಪಂದ್ಯದ ಮೇಲೆ ಅಭಿಮಾನ ಹೊಂದಿದ್ದರು. 1992ರ ಕ್ರಿಕೆಟ್ ವಿಶ್ವಕಪ್‌ನ್ನು ಟಿವಿಯಲ್ಲಿ ನೋಡಿದ ಬಳಿಕ ಕ್ರಿಕೆಟ್‌ನತ್ತ ಆಸಕ್ತಿ ಬೆಳೆಸಿಕೊಂಡಿದ್ದ ಗೋಸ್ವಾಮಿ ಐದು ವರ್ಷಗಳ ಬಳಿಕ 1997ರಲ್ಲಿ ನಡೆದಿದ್ದ ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್‌ನ ನಡುವಿನ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಬೆಲಿಂಡಾ ಕ್ಲಾರ್ಕ್ ಪ್ರದರ್ಶನವನ್ನು ಸ್ಟೇಡಿಯಂನಲ್ಲಿ ನೋಡಿ ಪ್ರಭಾವಿತಗೊಂಡಿದ್ದರು.

ಗೋಸ್ವಾಮಿ ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡಿದ್ದು, ಟೆಸ್ಟ್‌ನಲ್ಲಿ 25.72ರ ಸರಾಸರಿಯಲ್ಲಿ ಎರಡು ಅರ್ಧಶತಕ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 153 ಪಂದ್ಯಗಳಲ್ಲಿ ಒಟ್ಟು 919 ರನ್ ಗಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News