×
Ad

ತಮ್ಮ ವಿರುದ್ಧ ಹೇಳಿಕೆಗಾಗಿ ಆದಿತ್ಯನಾಥ್‌ರ ಪ್ರತಿಕೃತಿ ದಹಿಸಿದ ಮಥುರಾದ ಪಂಡಾಗಳು

Update: 2017-05-09 23:32 IST

ಮಥುರಾ, ಮೇ 9: ಆಗ್ರಾದ ‘ಲಪ್ಕಾ’ಗಳು ಮತ್ತು ಮಥುರಾದ ‘ಪಂಡಾ’ಗಳು ಸಮಾಜ ವಿರೋಧಿ ಶಕ್ತಿಗಳಾಗಿದ್ದು, ಅವರಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಹೇಳಿಕೆಯಿಂದ ಕೆರಳಿರುವ, ಪಂಡಾಗಳೆಂದು ಕರೆಯಲ್ಪಡುವ ಮಥುರಾ-ವೃಂದಾವನದ ಹಿಂದೂ ಪುರೋಹಿತರು ಅವರ ಕ್ಷಮಾಯಾಚನೆಗೆ ಆಗ್ರಹಿಸಿದ್ದಾರೆ.

ಈ ವಾರ ತನ್ನ ಆಗ್ರಾ ಭೇಟಿಯ ಸಂದರ್ಭ ಆದಿತ್ಯನಾಥ್‌ರು ಈ ಹೇಳಿಕೆಯನ್ನು ನೀಡಿದ್ದರು.
ಮಂಗಳವಾರ ಇಲ್ಲಿ ಮುಖ್ಯಮಂತ್ರಿ ಪ್ರತಿಕೃತಿಗಳನ್ನು ದಹಿಸಿದ ಪಂಡಾಗಳು ತಮ್ಮ ವಂಶಪಾರಂಪರ್ಯ ವೃತ್ತಿಗೆ ಕಡಿವಾಣ ಹಾಕುವ ಸರಕಾರದ ಯಾವುದೇ ಕ್ರಮವನ್ನು ಬಲವಾಗಿ ವಿರೋಧಿಸಿದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆಗ್ರಾ ಪ್ರವಾಸೋದ್ಯಮ ಅಭಿವೃದ್ಧಿ ಚೇಂಬರ್‌ನ ಕಾರ್ಯದರ್ಶಿ ವಿಶಾಲ ಶರ್ಮಾ ಅವರು, ಲಪ್ಕಾ ಎನ್ನುವುದು ಅವಮಾನಕಾರಿ ಎಂದು ಹೊರಗಿನವರಿಗೆ ಅನ್ನಿಸಿದರೂ, ಆಗ್ರಾದಲ್ಲಿನ ನೋಂದಣಿ ಹೊಂದಿರದ ಮಾರಾಟಗಾರರು ಮತ್ತು ಬೀದಿವ್ಯಾಪಾರಿಗಳಿಗೆ ಇದೇ ಶಬ್ದವನ್ನು ಬಳಸಲಾಗುತ್ತಿದೆ. ಆಗ್ರಾಕ್ಕೆ ಆಗಮಿಸುವ ಪ್ರವಾಸಿಗಳಿಗೆ ದುಂಬಾಲು ಬಿದ್ದು ಭಾರೀ ಕಮಿಷನ್ ಆಸೆಗಾಗಿ ದುಬಾರಿ ಸೇವೆಗಳಿಗೆ ಅವರನ್ನು ಬಲಿಪಶುಗಳಾಗಿಸುತ್ತಾರೆ, ಜೊತೆಗೆ ದುಬಾರಿ ಕರಕುಶಲ ಮಾರಾಟ ಅಂಗಡಿಗಳಿಗೆ ಕರೆದೊಯ್ದು ಸುಲಿಯುತ್ತಾರೆ ಎಂದರು. ಇತ್ತೀಚೆಗೆ ಲಪ್ಕಾಗಳು ಪ್ರವಾಸಿಗಳಿಗೆ ಕಿರುಕುಳ ನೀಡುವಲ್ಲಿ ಕುಖ್ಯಾತರಾಗಿದ್ದಾರೆ. ಇದು ಪ್ರವಾಸಿಗಳ ದೃಷ್ಟಿಯಲ್ಲಿ ಆಗ್ರಾ ಮಾತ್ರವಲ್ಲ....ಇಡೀ ದೇಶದ ವರ್ಚಸ್ಸನ್ನು ಕುಂದಿಸುತ್ತದೆ ಎಂದರು.
ಆದರೆ ಪಂಡಾಗಳು ಮಥುರಾದಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸುವಲ್ಲಿ ಹಿಂದೂಗಳಿಗೆ ನೆರವಾಗುವ ವಂಶ ಪಾರಂಪರ್ಯ ವೃತ್ತಿಯಲ್ಲಿ ತೊಡಗಿದ್ದಾರೆ ಎಂದು ವಾದಿಸಿದ ಶರ್ಮಾ, ಪಂಡಾಗಳು ಬಲವಂತಗೊಳಿಸುವ ರಿವಾಜುಗಳಿಂದಾಗಿ ಅವರೂ ಸ್ವಲ್ಪಮಟ್ಟಿಗೆ ಲಪ್ಕಾಗಳಂತೆ ಕಂಡರೂ ಇದು ಧಾರ್ಮಿಕ ವಿಷಯವಾಗಿರುವುದರಿಂದ ಮುಖ್ಯಮಂತ್ರಿಗಳು ಅವರನ್ನು ಲಪ್ಕಾಗಳೊಂದಿಗೆ ಹೋಲಿಸಬಾರದಿತ್ತು ಎಂದರು.
ಮುಖ್ಯಮಂತ್ರಿಗಳ ಹೇಳಿಕೆಯು ಇಡೀ ಪಂಡಾ ಸಮುದಾಯಕ್ಕೆ ಅವಮಾನವನ್ನುಂಟು ಮಾಡಿದೆ ಎಂದು ಹೇಳಿದ ಅಖಿಲ ಭಾರತೀಯ ತೀರ್ಥ ಪುರೋಹಿತ ಮಹಾಸಭಾದ ಉಪಾಧ್ಯಕ್ಷ ನವೀನ ನಗರ್ ಅವರು, ತಮ್ಮ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ನಡೆಸುವ ನಿರ್ಧಾರವನ್ನು ಸರಕಾರವು ಕೈಬಿಡಬೇಕು ಎಂದು ಆಗ್ರಹಿಸಿದರು.
ಮೇ 10ರೊಳಗೆ ಮುಖ್ಯಮಂತ್ರಿಗಳು ತನ್ನ ನಿರ್ಧಾರವನ್ನು ಹಿಂದೆಗೆದುಕೊಳ್ಳದಿದ್ದರೆ ಪಂಡಾ ಸಮುದಾದಯವು ಅವರ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತದೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡದೆ ತನ್ನ ಏಕತೆಯನ್ನು ಪ್ರದರ್ಶಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News