ಆಸ್ಟ್ರೇಲಿಯ: ಸಂಸತ್‌ನಲ್ಲೇ ಎದೆಹಾಲುಣಿಸಿದ ಸೆನೆಟರ್

Update: 2017-05-10 14:06 GMT

ಸಿಡ್ನಿ, ಮೇ 10: ಆಸ್ಟ್ರೇಲಿಯದ ಸಂಸತ್‌ನಲ್ಲಿ ಮಗುವಿಗೆ ಎದೆಹಾಲು ಉಣಿಸಿದ ಮೊದಲ ವ್ಯಕ್ತಿಯಾಗಿ ಕ್ವೀನ್ಸ್‌ಲ್ಯಾಂಡ್ ಸೆನೆಟರ್ ಲ್ಯಾರಿಸಾ ವಾಟರ್ಸ್ ದಾಖಲೆ ನಿರ್ಮಿಸಿದ್ದಾರೆ.

ಎರಡನೆ ಮಗುವಿಗೆ ಜನ್ಮ ನೀಡಿದ ಬಳಿಕ ಮಂಗಳವಾರ ಮೊದಲ ಬಾರಿಗೆ ಸಂಸತ್ತಿನ ಮೇಲ್ಮನೆ ಸೆನೆಟ್‌ಗೆ ವಾಟರ್ಸ್ ಮರಳಿದರು ಹಾಗೂ ಮತ ಹಾಕುವ ಅವಧಿಯಲ್ಲಿ ಎದೆಹಾಲುಣಿಸಲು ಮಗುವನ್ನು ಒಳಗೆ ಕರೆತಂದರು.

‘‘ಫೆಡರಲ್ ಸಂಸತ್ತಿನಲ್ಲಿ ಎದೆಹಾಲು ಕುಡಿದ ಮೊದಲ ಮಗು ನನ್ನ ಮಗಳು ಅಲಿಯಾ ಆಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಇನ್ನೂ ಹೆಚ್ಚು ಮಹಿಳೆಯರು ಮತ್ತು ಹೆತ್ತವರು ಸಂಸತ್ತಿನಲ್ಲಿ ಇರಬೇಕಾದ ಅಗತ್ಯವಿದೆ’’ ಎಂದು ವಾಟರ್ಸ್ ಟ್ವೀಟ್ ಮಾಡಿದ್ದಾರೆ.

ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರುತ್ತಿದ್ದ ಹಿನ್ನೆಲೆಯಲ್ಲಿ ಸಂಸತ್ತನ್ನು ಹೆಚ್ಚು ‘ಕುಟುಂಬ ಸ್ನೇಹಿ’ ಮಾಡುವುದಕ್ಕಾಗಿ, ಸಂಸತ್ತಿನಲ್ಲಿ ಎದೆಹಾಲು ಉಣಿಸುವುದಕ್ಕೆ ಸಂಬಂಧಿಸಿದ ನೂತನ ನಿಯಮಗಳನ್ನು ಕಳೆದ ವರ್ಷ ರೂಪಿಸಲಾಗಿತ್ತು.

ಹಿಂದಿನ ನಿಯಮಗಳು, ಮಕ್ಕಳನ್ನು ಸಂಸತ್‌ನೊಳಗೆ ಕರೆದುಕೊಂಡು ಹೋಗುವುದನ್ನು ನಿಷೇಧಿಸಿದ್ದವು.

ನಿಯಮಗಳ ಬದಲಾವಣೆಯಲ್ಲಿ ವಾಟರ್ಸ್ ಪ್ರಮುಖ ಪಾತ್ರ ವಹಿಸಿದ್ದರು.

‘‘ಯುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್ತಿನಲ್ಲಿರಬೇಕಾದರೆ, ನಾವು ನಿಯಮಗಳನ್ನು ಹೆಚ್ಚು ಕುಟುಂಬ ಸ್ನೇಹಿಯಾಗಿಸಬೇಕು’’ ಎಂದು ಅವರು ನವೆಂಬರ್‌ನಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News