ಟ್ರಂಪ್‌ರಿಂದ ಎಫ್‌ಬಿಐ ಮುಖ್ಯಸ್ಥನ ವಜಾ: ಟ್ರಂಪ್-ರಶ್ಯ ನಂಟಿನ ತನಿಖೆಯ ಮೇಲುಸ್ತುವಾರಿಯಾಗಿದ್ದ ಜೇಮ್ಸ್

Update: 2017-05-10 14:36 GMT

ವಾಶಿಂಗ್ಟನ್, ಮೇ 10: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ನಿರ್ದೇಶಕ ಜೇಮ್ಸ್ ಕಾಮಿ ಅವರನ್ನು ವಜಾಗೊಳಿಸಿದ್ದಾರೆ.

   ಹಿಲರಿ ಕ್ಲಿಂಟನ್ ವಿದೇಶ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಖಾಸಗಿ ಇಮೇಲ್ ಸರ್ವರೊಂದನ್ನು ಬಳಸಿದ ಆರೋಪದ ಕುರಿತ ತನಿಖೆಯನ್ನು ಜೇಮ್ಸ್ ನಿಭಾಯಿಸಿದ ರೀತಿಯಿಂದ ‘ಬೇಸತ್ತು’ ಟ್ರಂಪ್ ಈ ಕ್ರಮ ತೆಗೆದುಕೊಂಡಿದ್ದಾರೆ.
2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್‌ರನ್ನು ಸೋಲಿಸುವುದಕ್ಕಾಗಿ ರ

ಶ್ಯ ಹಸ್ತಕ್ಷೇಪ ಮಾಡಿದೆ ಹಾಗೂ ಟ್ರಂಪ್ ಪ್ರಚಾರ ತಂಡದ ಸದಸ್ಯರ ಜೊತೆ ಅದು ನಿರಂತರ ಸಂಪರ್ಕದಲ್ಲಿತ್ತು ಎಂಬ ಆರೋಪಗಳ ಬಗ್ಗೆಯೂ ಎಫ್‌ಬಿಐ ತನಿಖೆ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ತನಿಖೆಯ ಉಸ್ತುವಾರಿಯನ್ನು ಜೇಮ್ಸ್ ಕಾಮಿ ಅವರೇ ವಹಿಸಿದ್ದರು.

 ‘‘ನಿಮ್ಮ ವಿರುದ್ಧ ತನಿಖೆ ನಡೆಸಲಾಗುತ್ತಿಲ್ಲ ಎಂಬುದಾಗಿ ಮೂರು ಸಂದರ್ಭಗಳಲ್ಲಿ ನನಗೆ ಮಾಹಿತಿ ನೀಡಿರುವುದಕ್ಕಾಗಿ ನಾನು ನಿಮ್ಮನ್ನು ಶ್ಲಾಘಿಸುತ್ತೇನೆ. ಆದಾಗ್ಯೂ, ಎಫ್‌ಬಿಐಯನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ನೀವು ಸಮರ್ಥರಲ್ಲ ಎಂಬ ಕಾನೂನು ಇಲಾಖೆಯ ತೀರ್ಮಾನದೊಂದಿಗೆ ನಾನು ಸಹಮತ ಹೊಂದಿದ್ದೇನೆ’’ ಎಂದು ಮಂಗಳವಾರ ಕಾಮಿಗೆ ಬರೆದ ಪತ್ರವೊಂದರಲ್ಲಿ ಟ್ರಂಪ್ ಹೇಳಿದ್ದಾರೆ.

 ‘‘ತನ್ನ ಮಹತ್ವದ ಕಾನೂನು ಅನುಷ್ಠಾನ ಕಾರ್ಯದಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಮರುಗಳಿಸುವ ನಿಟ್ಟಿನಲ್ಲಿ ಎಫ್‌ಬಿಐಗೆ ನೂತನ ನಾಯಕತ್ವವನ್ನು ಹುಡುಕುವುದು ಈಗಿನ ಅಗತ್ಯವಾಗಿದೆ’’ ಎಂದು ಪತ್ರದಲ್ಲಿ ಟ್ರಂಪ್ ಹೇಳಿದ್ದಾರೆ.

ಅದೇ ವೇಳೆ, ಉಪ ಅಟಾರ್ನಿ ಜನರಲ್ ರಾಡ್ ರೊಸೆಂಟೀನ್ ಮತ್ತು ಅಟಾರ್ನಿ ಜನರಲ್ ಜೆಫ್ ಸೆಶನ್ಸ್ ಅವರಿಬ್ಬರು ಶಿಫಾರಸುಗಳ ಆಧಾರದಲ್ಲಿ ‘ನಿಮ್ಮನ್ನು ಸೇವೆಯಿಂದ ವಜಾಗೊಳಿಸಲಾಗಿದೆ’ ಎಂಬುದಾಗಿ ಕಾಮಿಗೆ ಟ್ರಂಪ್ ತಿಳಿಸಿದ್ದಾರೆ ಎಂದು ಪ್ರತ್ಯೇಕ ಹೇಳಿಕೆಯೊಂದರಲ್ಲಿ ಶ್ವೇತಭವನ ಹೇಳಿದೆ.
ಲಾಸ್ ಏಂಜಲಿಸ್‌ನಲ್ಲಿರುವ ಎಫ್‌ಬಿಐಯ ಕ್ಷೇತ್ರ ಕಚೇರಿಯಲ್ಲಿ ಸಂಸ್ಥೆಯ ಉದ್ಯೋಗಿಗಳೊಂದಿಗೆ ಮಾತನಾಡುತ್ತಿರುವ ವೇಳೆ ತನ್ನನ್ನು ಹುದ್ದೆಯಿಂದ ವಜಾಗೊಳಿಸಿರುವ ವಿಷಯ ಕಾಮಿಗೆ ತಿಳಿಯಿತು ಎನ್ನಲಾಗಿದೆ.


ರಶ್ಯ-ಟ್ರಂಪ್ ನಂಟಿನ ತನಿಖೆಯ ಗತಿ ಏನು?

2016 ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪ್ರಚಾರ ತಂಡವು ರಶ್ಯದೊಂದಿಗೆ ನಿರಂತರ ಸಂಪರ್ಕದಲ್ಲಿತ್ತು ಹಾಗೂ ಟ್ರಂಪ್‌ರ ಎದುರಾಳಿ ಹಿಲರಿ ಕ್ಲಿಂಟನ್‌ರನ್ನು ಸೋಲಿಸಲು ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿತ್ತು ಎಂಬ ಆರೋಪಗಳ ಬಗ್ಗೆ ಈಗಾಗಲೇ ಎಫ್‌ಬಿಐ ನಡೆಸುತ್ತಿರುವ ತನಿಖೆಯ ಗತಿ ಏನು?
ತನಿಖೆ ಮುಂದುವರಿಯುತ್ತದೆ, ಆದರೆ, ಟ್ರಂಪ್ ಪರ ನಿಲುವು ಹೊಂದಿರುವ ಎಫ್‌ಬಿಐ ಮುಖ್ಯಸ್ಥನೋರ್ವ ವಿಚಾರಣೆಯು ನಿಧಾನಗತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬಲ್ಲ ಎಂದು ಸಂಸ್ಥೆಯ ಮಾಜಿ ಉದ್ಯೋಗಿಗಳು ಹೇಳುತ್ತಾರೆ.

‘‘ತನಿಖೆಯನ್ನು ನಿಲ್ಲಿಸುವಂತೆ ಎಫ್‌ಬಿಐ ಸಿಬ್ಬಂದಿಗೆ ಹೇಳಬೇಕಾಗಿಲ್ಲ. ಆದರೆ, ವಿಚಾರಣೆಯನ್ನು ಅನಿರ್ದಿಷ್ಟಾವಧಿವರೆಗೆ ಮುಂದಕ್ಕೆಳೆಯುತ್ತಾ ಹೋದರೂ ಸಾಕು. ತನಿಖೆ ಮೂಲೆಗುಂಪಾಗುತ್ತದೆ’’ ಎಂದು ಅವರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News