ಜು. 10ರಂದು ವಿಚಾರಣೆಗೆ ಮಲ್ಯ ಹಾಜರಾತಿ ಖಚಿತಪಡಿಸಿ: ಗೃಹ ಸಚಿವಾಲಯಕ್ಕೆ ಸುಪ್ರೀಂ ನಿರ್ದೇಶ

Update: 2017-05-10 14:46 GMT

  ಹೊಸದಿಲ್ಲಿ, ಮೇ 10 : ಇದೀಗ ಬ್ರಿಟನ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಜುಲೈ 10ರಂದು ನ್ಯಾಯಾಲಯದೆದುರು ವಿಚಾರಣೆಗೆ ಹಾಜರಾಗುವುದನ್ನು ಖಚಿತ ಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಗೃಹ ಸಚಿವಾಲಯಕ್ಕೆ ಆದೇಶ ನೀಡಿದೆ. ಮಲ್ಯ ವಿರುದ್ಧದ ನ್ಯಾಯಾಲಯ ನಿಂದನೆಯ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣದ ಕುರಿತು ಅಂದು ವಿಚಾರಣೆ ನಡೆಯಲಿದೆ.

   ಆಸ್ತಿಯ ಸಂಪೂರ್ಣ ವಿವರ ನೀಡಬೇಕೆಂಬ ಸುಪ್ರೀಂಕೋರ್ಟ್ ಆದೇಶ ಹಾಗೂ ಬ್ರಿಟನ್‌ನ ಡಿಯಾಗಿಯೊ ಸಂಸ್ಥೆಯಿಂದ ಪಡೆದ 40 ಮಿಲಿಯನ್ ಡಾಲರ್ ಹಣವನ್ನು ಕರ್ನಾಟಕ ಹೈಕೋರ್ಟ್‌ನ ಆದೇಶ ಉಲ್ಲಂಘಿಸಿ ತನ್ನ ಮೂವರು ಮಕ್ಕಳ ಖಾತೆಗೆ ವರ್ಗಾಯಿಸಿದ ಕಾರಣ ಮಲ್ಯ ನ್ಯಾಯಾಲಯ ನಿಂದನೆ ಎಸಗಿದ್ದಾರೆ ಎಂದು ಸುಪ್ರೀಂಕೋರ್ಟ್ ತಿಳಿಸಿತ್ತು.

ಈಗ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಕಿಂಗ್‌ಫಿಷರ್ ಏರ್‌ಲೈನ್ಸ್ ಸಂಸ್ಥೆಯ ಹೆಸರಲ್ಲಿ ಪಡೆದಿರುವ 9000 ಕೋಟಿ ರೂ. ಸಾಲ ಮರುಪಾವತಿಸದ ಪ್ರಕರಣದಲ್ಲಿ ಆರೋಪಿಯಾಗಿರುವ ಮಲ್ಯರನ್ನು ಶೀಘ್ರ ಭಾರತಕ್ಕೆ ಗಡಿಪಾರು ಮಾಡಲು ಕ್ರಮ ಕೈಗೊಳ್ಳುವಂತೆ ಇತ್ತೀಚೆಗೆ ಭಾರತವು ಬ್ರಿಟನ್‌ಗೆ ಕೋರಿಕೆ ಸಲ್ಲಿಸಿತ್ತು.

2017ರ ಜುಲೈ 10ರಂದು ಈ ನ್ಯಾಯಾಲಯದೆದುರು (ಸುಪ್ರೀಂಕೋರ್ಟ್ ಎದುರು) ವಿಜಯ್ ಮಲ್ಯ ಹಾಜರಾತಿಯನ್ನು ಕೇಂದ್ರ ಸರಕಾರದ ಗೃಹ ಸಚಿವಾಲಯವು ಖಾತರಿ ಮತ್ತು ನಿಶ್ಚಿತಪಡಿಸಬೇಕು ಎಂದು ಆದೇಶಿಸುತ್ತೇವೆ. ಈ ನಿರ್ಣಯದ ಒಂದು ಪ್ರತಿಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿಕೊಡಬೇಕು ಎಂದು ನ್ಯಾಯಮೂರ್ತಿಗಳಾದ ಆದರ್ಶ್ ಕುಮಾರ್ ಗೋಯೆಲ್ ಮತ್ತು ಉದಯ್ ಉಮೇಶ್ ಲಲಿತ್ ಅವರಿದ್ದ ನ್ಯಾಯಾಲಯದ ಪೀಠವೊಂದು ತಿಳಿಸಿತು.

    ನ್ಯಾಯಾಲಯ ನಿಂದನೆ ಅರ್ಜಿಯ ಬಗ್ಗೆ ಕಳಿಸಲಾದ ನೋಟಿಸ್‌ಗೆ ಮಲ್ಯ ಉತ್ತರವನ್ನೂ ನೀಡಿಲ್ಲ ಅಥವಾ ವಿಚಾರಣೆಗೆ ಹಾಜರಾಗಿಲ್ಲ. ಮಲ್ಯ ಅಪರಾಧಿ ಎಂದು ಸಾಬೀತಾಗಿರುವ ಕಾರಣ ಅವರಿಗೆ ಇನ್ನೊಂದು ಅವಕಾಶ ಅಥವಾ ಪ್ರಸ್ತಾವಿತ ಶಿಕ್ಷೆಯ ಬಗ್ಗೆ ಅವರ ಹೇಳಿಕೆ ಪಡೆಯುವ ಅಗತ್ಯವಿಲ್ಲ ಎಂದು ಭಾವಿಸಲಾಗಿದೆ. ಆದ್ದರಿಂದ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿ ಅಂದು ಮಲ್ಯರ ಉಪಸ್ಥಿತಿಯಲ್ಲಿ ಶಿಕ್ಷೆಯ ಪ್ರಮಾಣ ನಿರ್ಧರಿಸಲಾಗುವುದು ಎಂದು ಪೀಠವು ತಿಳಿಸಿತು. ನ್ಯಾಯಾಲಯ ನಿಂದನೆ ಅಪರಾಧಕ್ಕೆ ಆರು ತಿಂಗಳ ಜೈಲುಶಿಕ್ಷೆ ಅಥವಾ 2000 ರೂ.ದಂಡ, ಅಥವಾ ಎರಡನ್ನೂ ಒಟ್ಟಿಗೇ ವಿಧಿಸಲಾಗುತ್ತದೆ.

ಮಲ್ಯ ತನ್ನ ಸಂಪೂರ್ಣ ಆಸ್ತಿಯ ವಿವರ ನೀಡಿಲ್ಲ ಮತ್ತು ವಿವಿಧ ನ್ಯಾಯಾಂಗ ಆದೇಶಗಳನ್ನು ಉಲ್ಲಂಘಿಸಿದ್ದಾರೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಮಲ್ಯ ವೈಯಕ್ತಿಕವಾಗಿ ಜಾಮೀನು ನೀಡಿರುವ ಆಸ್ತಿಯೂ ಅವರು ಘೋಷಿಸಬೇಕಿರುವ ಆಸ್ತಿಯಲ್ಲಿ ಸೇರಬೇಕೇ ಎಂಬ ವಿಷಯ ಇಲ್ಲಿ ಅಪ್ರಸ್ತುತವಾಗಿದೆ. ತಮ್ಮ ಆಸ್ತಿಯ ಸಂಪೂರ್ಣ ವಿವರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕೆ ಅವರು ಬದ್ಧರಾಗಿರಬೇಕು ಎಂದು ನ್ಯಾಯಾಲಯ ತಿಳಿಸಿತು. ಅಲ್ಲದೆ ಎಡ್ಮಂಡ್ ಡೆ ರೊಷಿಲ್ಡ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವುದನ್ನು ಮಲ್ಯ ತಿಳಿಸಿಲ್ಲ ಎಂಬ ಎಸ್‌ಬಿಐ ಹೇಳಿಕೆ ಸರಿಯಾದುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

   ವಿದೇಶದಲ್ಲಿರುವ ಬ್ಯಾಂಕ್ ಖಾತೆಗಳ ಬಗ್ಗೆ ಮಲ್ಯ ಯಾವುದೇ ವಿವರ ನೀಡಿಲ್ಲ. ಇದನ್ನು ಕೇವಲ ಉಲ್ಲಂಘನೆ ಎಂದು ಭಾವಿಸಲಾಗದು. ಎಡ್ಮಂಡ್ ಡೆ ರೊಷಿಲ್ಡ್ ಬ್ಯಾಂಕ್‌ನಲ್ಲಿರುವ ಖಾತೆಯ ಮೂಲಕವೇ 40 ಮಿಲಿಯನ ಡಾಲರ್‌ಗಳಷ್ಟು ಹಣವನ್ನು ರವಾನಿಸಲಾಗಿರುವುದನ್ನು ಇಲ್ಲಿ ಗಮನಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಕರ್ನಾಟಕ ಹೈಕೋರ್ಟ್ ಮಲ್ಯರಿಗೆ ಸೇರಿದ ಸ್ಥಿರ ಅಥವಾ ಚರ ಆಸ್ತಿಗಳ ಮಾರಾಟ, ಅಥವಾ ಇವನ್ನು ಮೂರನೇ ವ್ಯಕ್ತಿಯ ಹೆಸರಿಗೆ ವರ್ಗಾಯಿಸುವುದನ್ನು ನಿರ್ಬಂಧಿಸಿದೆ. ಆದರೆ ಈ ಆದೇಶ ಉಲ್ಲಂಘಿಸಿ 40 ಮಿಲಿಯನ್ ಡಾಲರ್ ಹಣವನ್ನು ಮಲ್ಯರ ನಿಯಂತ್ರಣದಲ್ಲಿರದ ಟ್ರಸ್ಟ್‌ನ ಹೆಸರಿಗೆ ವರ್ಗಾಯಿಸಲಾಗಿದೆ. ಹೀಗೆ ವರ್ಗಾಯಿಸಿರುವ ಕಾರಣ ಈ ಹಣದ ಕುರಿತು ನ್ಯಾಯಾಲಯ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ . ಈ ಹಿನ್ನೆಲೆಯಲ್ಲಿ, 40 ಮಿಲಿಯನ್ ಡಾಲರ್‌ನಷ್ಟು ಹಣ ಎಲ್ಲಿಂದ ಬಂದಿದೆ ಮತ್ತು ಎಲ್ಲಿಗೆ ಬಟವಾಡೆಯಾಗಿದೆ ಎಂಬುದನ್ನಾದರೂ ಮಲ್ಯ ಬಾಯಿಬಿಡಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News