ದ.ಕ. ಜಿಲ್ಲಾ ಅಧ್ಯಕ್ಷತೆ: ಮಿಥುನ್ ರೈ v/s ಲುಕ್ಮಾನ್

Update: 2017-05-10 18:24 GMT
  • ಮೇ 14ರಿಂದ 17ರವರೆಗೆ ಚುನಾವಣೆ
  • 21 ಸಾವಿರ ಮತದಾರರಲ್ಲಿ ಮುಸ್ಲಿಮರೇ ಅಧಿಕ

ಮಂಗಳೂರು, ಮೇ 10: ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನಕ್ಕೆ ಮೇ 4ರಿಂದ 17ರವರೆಗೆ ನಡೆಯಲಿರುವ ಚುನಾವಣಾ ಪ್ರಕ್ರಿಯೆ ಬಿರುಸು ಪಡೆಯುತ್ತಿದೆ. ಆಂತರಿಕ ಚುನಾವಣೆಯಾದರೂ ಆಕಾಂಕ್ಷಿಗಳ ಮಧ್ಯೆ ‘ಫ್ರೆಂಡ್ಲಿ ಫೈಟ್’ ಶುರುವಾಗಿದೆ. ಅದರಂತೆ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಮಿಥುನ್ ರೈ ಮತ್ತು ಉಪಾಧ್ಯಕ್ಷ ಲುಕ್ಮಾನ್ ಬಂಟ್ವಾಳರ ಮಧ್ಯೆ ತೀವ್ರ ಪೈಪೋಟಿ ಕಾಣಿಸಿದೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಮಾರ್ಗದರ್ಶನದಂತೆ 2011ರಿಂದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯುತ್ತಾ ಬಂದಿದೆ. ಈ ಚುನಾವಣೆಯ ಬಗ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಆರಂಭದಲ್ಲೇ ಹೆಚ್ಚು ಆಸಕ್ತಿ ವಹಿಸಿದ್ದರೂ ಮಾಹಿತಿಯ ಕೊರತೆಯಿಂದ ಸದಸ್ಯತ್ವ ಪಡೆಯಲಾಗದೆ ಪರಿತಪಿಸಿದ್ದರು. ಆದರೂ 2011 ಮತ್ತು 2013ರಲ್ಲಿ ನಡೆದ ಚುನಾವಣೆಯಲ್ಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಿಥುನ್ ರೈ ಚುನಾಯಿತರಾಗಿದ್ದರು. ಆ ವೇಳೆ ಸದಸ್ಯತ್ವ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ, ಈ ಬಾರಿ ನಿರೀಕ್ಷೆಗೂ ಮೀರಿ ಯುವಕರು ಸದಸ್ಯತ್ವ ಪಡೆದಿದ್ದಾರೆ. ಅಂದರೆ ಸುಮಾರು 21 ಸಾವಿರ ಯುವಕರು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದಿದ್ದು, ಸಹಜವಾಗಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ.

 ಇದೀಗ ದ.ಕ. ಜಿಲ್ಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಿಥುನ್ ರೈ ಮತ್ತು ಲುಕ್ಮಾನ್ ಬಂಟ್ವಾಳ ಹಾಗೂ ಸುನಿತ್ ಡಿಸೋಜ ಸ್ಪರ್ಧಿಸುತ್ತಿದ್ದಾರೆ. ಮೀಸಲಾತಿಯ ಅನ್ವಯ ಸುನಿತ್ ಡಿಸೋಜ ಬೆರಳೆಣಿಕೆಯ ಮತಗಳ ಮೂಲಕ ಉಪಾಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಲು ಅವಕಾಶವಿದೆ. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ಮಿಥುನ್ ರೈ ಮತ್ತು ಲುಕ್ಮಾನ್ ಮಧ್ಯೆ ಪೈಪೋಟಿ ಇದ್ದು, ಮತದಾರರ ಸಂಖ್ಯೆಯೂ ಹೆಚ್ಚಿರುವ ಕಾರಣ ಸಹಜವಾಗಿ ಕುತೂಹಲ ಮೂಡಿಸಿದೆ. ಇಬ್ಬರೂ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ತಮ್ಮತ್ತ ಓಲೈಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.

  • ನಾಲ್ಕು ದಿನಗಳ ಕಾಲ ಚುನಾವಣೆ

ಯುವ ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನಕ್ಕೆ 4 ದಿನಗಳ ಕಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ನಡೆಯಲಿದೆ. ಮೇ 14ರಂದು ಮಂಗಳೂರು ನಗರ ಉತ್ತರ ಮತ್ತು ಬೆಳ್ತಂಗಡಿ, ಮೇ 15ರಂದು ಬಂಟ್ವಾಳ ಮತ್ತು ಸುಳ್ಯ, ಮೇ 16ರಂದು ಮಂಗಳೂರು ಮತ್ತು ಪುತ್ತೂರು, ಮೇ 17ರಂದು ಮಂಗಳೂರು ನಗರ ದಕ್ಷಿಣ ಮತ್ತು ಮೂಡುಬಿದಿರೆ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.

ಬೆಳಗ್ಗೆ 8ರಿಂದ ಸಂಜೆ 5ರವರೆಗೆ ನಡೆಯುವ ಈ ಚುನಾವಣೆಗೆ 8 ಕ್ಷೇತ್ರಗಳಲ್ಲಿ 8 ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ.

  • ಚುನಾವಣಾ ಆಯೋಗದ ಮಾದರಿ

ಚುನಾವಣಾ ಆಯೋಗದ ಮಾದರಿಯಲ್ಲೇ ನಡೆಯುವ ಈ ಚುನಾವಣೆಗೆ ಆಯೋಗದ ನಿವೃತ್ತ ಅಧಿಕಾರಿ ಸಿಬ್ಬಂದಿ ವರ್ಗವನ್ನು ಎಐಸಿಸಿ ಬಳಸಿಕೊಂಡಿದೆ. ಅದರಂತೆ ಪ್ರತಿಯೊಂದು ಜಿಲ್ಲೆಗೆ ಆರ್.ಒ., ಎಆರ್‌ಒ, ವಲಯ ಚುನಾವಣಾಧಿಕಾರಿ ಎಂದೆಲ್ಲಾ ಹುದ್ದೆಗಳನ್ನು ಸೃಷ್ಟಿಸಿ ನಿವೃತ್ತ ಅಧಿಕಾರಿ ಸಿಬ್ಬಂದಿ ವರ್ಗವನ್ನು ಕಳುಹಿಸಿಕೊಡಲಾಗಿದೆ. ದ.ಕ. ಜಿಲ್ಲೆಗೂ ಈ ಅಧಿಕಾರಿಗಳು ಆಗಮಿಸಿ ಚುನಾವಣಾ ಪ್ರಕ್ರಿಯೆ ಆರಂಭಿಸಿದ್ದಾರೆ.

  • ಒಬ್ಬನಿಗೆ 5 ಮತದಾನದ ಹಕ್ಕು

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಧ್ಯಕ್ಷ ಸ್ಥಾನಕ್ಕೆ ಒಂದು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎರಡು ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎರಡು ಹೀಗೆ ಪ್ರತಿಯೊಬ್ಬ ಮತದಾರನಿಗೆ ಐದು ಮತಗಳನ್ನು ಚಲಾಯಿಸುವ ಹಕ್ಕು ಇದೆ.

ವಿಧಾನಸಭಾ ಕ್ಷೇತ್ರ ಮಟ್ಟದ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸಿದವರು ಅಧ್ಯಕ್ಷ, ಅದಕ್ಕಿಂತ ಕಡಿಮೆ ಮತ ಪಡೆದವರು ಉಪಾಧ್ಯಕ್ಷ ಮತ್ತು ಅದಕ್ಕಿಂತಲೂ ಕಡಿಮೆ ಮತ ಪಡೆದವರು ಪ್ರಧಾನ ಕಾರ್ಯದರ್ಶಿಯಾಗಲಿದ್ದಾರೆ. ಆದರೆ ಜಿಲ್ಲಾ ಮತ್ತು ರಾಜ್ಯಮಟ್ಟದ ಚುನಾವಣೆಯಲ್ಲಿ ಹೆಚ್ಚು ಮತ ಪಡೆದವರು ಅಧ್ಯಕ್ಷ ಹಾಗೂ ಅದಕ್ಕಿಂತ ಕಡಿಮೆ ಮತ ಪಡೆದವರು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ. ಅದೇರೀತಿ ಪ್ರಧಾನ ಕಾರ್ಯದರ್ಶಿ ಮತ್ತು ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಚುನಾಯಿತರಾಗಲಿದ್ದಾರೆ. ಈ ಚುನಾಯಿತರ ಅಧಿಕಾರದ ಅವಧಿಯು ಎರಡು ವರ್ಷಗಳಾಗಿತ್ತು. ಆದರೆ, ಈ ಬಾರಿ ಚುನಾವಣಾ ಪ್ರಕ್ರಿಯೆಯಲ್ಲಿ ಒಂದಷ್ಟು ಸುಧಾರಣೆ ತರಲಾಗಿದ್ದು, ಅಧಿಕಾರದ ಅವಧಿಯನ್ನು 3 ವರ್ಷಕ್ಕೆ ಏರಿಸಲಾಗಿದೆ. ಇನ್ನು ಪದಾಧಿಕಾರಿಗಳ ಸ್ಥಾನಕ್ಕೆ ಸ್ಪರ್ಧಿಸುವವರ ಪ್ರಾಯ 35 ವರ್ಷ ಮೀರಬಾರದು.

  • ಮುಸ್ಲಿಮರೇ ಅಧಿಕ

18ರಿಂದ 35 ವರ್ಷ ಪ್ರಾಯದೊಳಗಿನ ಯುವಕರು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. 2016ರ ಡಿಸೆಂಬರ್‌ಗೆ ಸದಸ್ಯತ್ವ ಅಭಿಯಾನವನ್ನು ಮುಕ್ತಾಯಗೊಳಿಸಲಾಗಿದೆ. ಅದರಂತೆ ಸುಮಾರು 21 ಸಾವಿರ ಯುವಕರು ಜಿಲ್ಲಾ ಯುವ ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದಾರೆ. ಈ ಪೈಕಿ ಮುಸ್ಲಿಮರು ಸುಮಾರು 13 ಸಾವಿರ ಮತ್ತು ಕ್ರೈಸ್ತರು 1,500 ಸಾವಿರ ಹಾಗೂ ಇತರರು 6,500 ಮಂದಿ ಇದ್ದಾರೆ.

  • ಮುಸ್ಲಿಮರ ಕಡೆಗಣನೆಯ ಆರೋಪ

ನಮ್ಮನ್ನು ಕಾಂಗ್ರೆಸ್ ಪಕ್ಷವು ಬ್ಯಾನರ್ ಕಟ್ಟಲು, ಪೋಸ್ಟರ್ ಹಚ್ಚಲು, ಮೈಕ್ ಕಟ್ಟಿ ಘೋಷಣೆ ಕೂಗಲು, ಮನೆಮನೆ ತೆರಳಿ ಮತ ಯಾಚಿಸಲು ಬಳಸಿಕೊಳ್ಳುತ್ತಿವೆಯೇ ವಿನಃ ಎಂದೂ ಪ್ರಮುಖ ಹುದ್ದೆಗಳಿಗೆ ಪರಿಗಣಿಸುತ್ತಿಲ್ಲ. ಆದರೆ ಇತರ ಜಾತಿಗಳಿಗೆ ನಿರೀಕ್ಷೆಗೂ ಮೀರಿದ ಸ್ಥಾನಮಾನ ನೀಡಿ ಪ್ರೋತ್ಸಾಹ ನೀಡುತ್ತಿದೆ. ಮುಸ್ಲಿಮರಿಗೆ ಕಾಂಗ್ರೆಸ್ ಅನಿವಾರ್ಯ ಎಂಬ ಭಾವನೆಯನ್ನು ಸಾರ್ವತ್ರಿಕವಾಗಿ ಹುಟ್ಟು ಹಾಕಲಾಗುತ್ತಿದೆ. ಇದನ್ನು ನಂಬಿದ ಮುಸ್ಲಿಮರು ಕಾಂಗ್ರೆಸ್ನಲ್ಲಿ ತಮ್ಮ ಸ್ಥಾನಮಾನಗಳಿಗಾಗಿ ಹಕ್ಕುಗಳನ್ನು ಮಂಡಿಸುತ್ತಿಲ್ಲ. ಶಾಸಕರು, ಸಚಿವರ ಕೃಪೆಗೆ ಪಾತ್ರರಾಗಿ ಯಾವುದಾದರು ಉನ್ನತ ಸ್ಥಾನಮಾನ ಪಡೆದವರು ಆ ಬಳಿಕ ಸಮುದಾಯದ ಯುವ ಕಾರ್ಯಕರ್ತರನ್ನು ಬೆಳೆಸಲು ಹಿಂದೇಟು ಹಾಕುತ್ತಾರೆ ಎಂದು ಸುಮಾರು 20 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರೊಬ್ಬರು ಅಭಿಪ್ರಾಯಪಡುತ್ತಾರೆ.

ನಮ್ಮದು ಆಂತರಿಕ ಚುನಾವಣೆ. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಅದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಪಕ್ಷದೊಳಗೆ ಅಧ್ಯಕ್ಷ ಹುದ್ದೆಗಾಗಿ ಫ್ರೆಂಡ್ಲಿ ಫೈಟ್ ನಡೆಯುತ್ತಿದೆ.

 -ಮಿಥುನ್ ರೈ

(ಅಧ್ಯಕ್ಷ ಸ್ಥಾನದ ಅಭ್ಯರ್ಥಿ)

ಕಳೆದ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ನಾಯಕರ ಮಾರ್ಗದರ್ಶನ ಮತ್ತು ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ಈ ಬಾರಿ ಸಾಕಷ್ಟು ಸಂಖ್ಯೆಯ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದು, ಆಂತರಿಕ ಚುನಾವಣೆ ಯಲ್ಲಿ ಗೆಲುವು ಸಾಧಿಸುವ ಭರವಸೆ ಇದೆ.

-ಲುಕ್ಮಾನ್ ಬಂಟ್ವಾಳ್

(ಅಧ್ಯಕ್ಷ ಸ್ಥಾನದ ಅಭ್ಯರ್ಥಿ)

ಮುಸ್ಲಿಮರಿಗೆ 1979ರ ಬಳಿಕ ಸಿಕ್ಕಿಲ್ಲ ಅವಕಾಶ

ದ.ಕ. ಜಿಲ್ಲಾ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹೀಗೆ ಪಕ್ಷದ ವಿವಿಧ ಘಟಕಗಳಿಗೆ ನೇಮಕಾತಿ ನಡೆಯುವಾಗ ಹೈಕಮಾಂಡ್ ಮುಸ್ಲಿಮರನ್ನು ನಿರ್ಲಕ್ಷಿಸುತ್ತಾ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಹೇಳಿಕೆ ಅಥವಾ ಅಸಮಾಧಾನ ಇಂದು ನಿನ್ನೆಯದಲ್ಲ. ಆರಂಭದಲ್ಲಿ ಇದು ಕೇವಲ ರೋದನವಾಗಿತ್ತು. ಆದರೆ, ಇದೀಗ ಮುಸ್ಲಿಮರು ನೇರ ಆರೋಪ ಮಾಡುತ್ತಿದ್ದಾರೆ, ಅಸಮಾಧಾನ ಬಹಿರಂಗಪಡಿಸುತ್ತಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇದುವರೆಗೆ ಒಬ್ಬನೇ ಒಬ್ಬ ಮುಸ್ಲಿಮನನ್ನು ಪಕ್ಷ ಪರಿಗಣಿಸಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಇಬ್ರಾಹೀಂ ಕೋಡಿಜಾಲ್ ಅವರನ್ನು ಜಿಲ್ಲಾ ಹಂಗಾಮಿ ಅಧ್ಯಕ್ಷ ಎಂದು ಗುರುತಿಸಲಾಗಿದೆಯೇ ವಿನಃ ಅವರಿಗೆ ೂರ್ಣ ಪ್ರಮಾಣದ ಅಧಿಕಾರ ನೀಡಲಿಲ್ಲ. ಮಹಿಳಾ ಕಾಂಗ್ರೆಸ್‌ಗೂ ಮುಸ್ಲಿಂ ಮಹಿಳೆಯರನ್ನು ಪರಿಗಣಿಸಿದ ಉದಾಹರಣೆಯೇ ಇಲ್ಲ.

ಇನ್ನು 1971ರಿಂದ 1976ರವರೆಗೆ ಬಿ.ಇಬ್ರಾಹೀಂ, 1978-79ರಲ್ಲಿ ಉಳ್ಳಾಲದ ಯು.ಎಚ್.ಹಮೀದ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿದ್ದು ಬಿಟ್ಟರೆ ಉಳಿದಂತೆ ಇದುವರೆಗೂ ಮುಸ್ಲಿಮರನ್ನು ಪ್ರಮುಖ ಸ್ಥಾನಕ್ಕೆ ಕಾಂಗ್ರೆಸ್ ನೇಮಿಸಿಲ್ಲ.

ಇನ್ನು ಯುವ ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಿಸಿ 6 ವರ್ಷವಾದರೂ ಮುಸ್ಲಿಮರು ಈ ಸ್ಥಾನದತ್ತ ಸುಳಿಯದಂತಹ ವಾತಾವರಣ ಸೃಷ್ಟಿಸಲಾಗುತ್ತಿದೆ ಎನ್ನಲಾಗಿದೆ.

  • ಸಚಿವರು, ಶಾಸಕರ ಜಾಣ ಮೌನ

ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಜಿಲ್ಲೆಯ ಕಾಂಗ್ರೆಸ್ ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್ ನೇರವಾಗಿ ಯಾರನ್ನೂ ಬೆಂಬಲಿಸದೆ ತಟಸ್ಥ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ಅಭ್ಯರ್ಥಿಗೆ ಬೆಂಬಲ ನೀಡಿದರೆ ಮುಂದಿನ ಚುನಾವಣೆಯಲ್ಲಿ ಇನ್ನೊಂದು ಸಮುದಾಯದ ಅಸಮಾಧಾನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ ಎಂಬುದು ಜಿಲ್ಲೆಯ ಕಾಂಗ್ರೆಸಿಗರ ಅಭಿಪ್ರಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News