×
Ad

ಪಾಕ್ ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ: ನೌಶೇರಾ ಸೆಕ್ಟರ್ ನಲ್ಲಿ ಮಹಿಳೆ ಬಲಿ

Update: 2017-05-11 09:06 IST

ಶ್ರೀನಗರ, ಮೇ 11: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ಪ್ರದೇಶದಲ್ಲಿ ಬುಧವಾರ ರಾತ್ರಿ ಗಡಿ ನಿಯಂತ್ರಣ ರೇಖೆಯ ಸಮೀಪ ಪಾಕಿಸ್ತಾನಿ ಸೇನೆಯಿಂದ ನಡೆದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದು, ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.

ಪಾಕಿಸ್ತಾನಿ ಸೇನೆ ಸಣ್ಣ ಶಸ್ತ್ರಾಸ್ತ್ರ ಹಾಗೂ ಮೋರ್ಟರ್ ದಾಳಿ ನಡೆಸಿತ್ತೆನ್ನಲಾಗಿದೆ. ಭಾರತೀಯ ಸೇನಾ ಪಡೆಗಳು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದು ಎರಡೂ ಕಡೆಗಳಿಂದ ಆಗಾಗ ಗುಂಡಿನ ಚಕಮಕಿ ನಡೆಯುತ್ತಿದೆ. ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಪೂಂಚ್ ಜಿಲ್ಲೆಯಲ್ಲಿ ಗುಂಡಿನ ದಾಳಿ ನಡೆಸಿ ಸೇನಾ ಅಧಿಕಾರಿ ಹಾಗೂ ಬಿಎಸ್‌ಎಫ್ ಕಾನ್ಸ್ಟೇಬಲ್ ಒಬ್ಬರ ಹತ್ಯೆಗೆ ಕಾರಣವಾದ ಘಟನೆ ನಡೆದ ಒಂದು ವಾರದ ತರುವಾಯ ಈ ಘಟನೆ ನಡೆದಿದೆ. ಈ ದಾಳಿಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಹಾಗೂ ಹೆಡ್ ಕಾನ್ಸ್ಟೇಬಲ್ ಒಬ್ಬರು ಗಾಯಗೊಂಡಿದ್ದರು.

ಪಾಕಿಸ್ತಾನವು ಕಳೆದ ವರ್ಷ 449 ಬಾರಿ ಕದನ ವಿರಾಮ ಉಲ್ಲಂಘಿಸಿದ್ದರೆ 2015ರಲ್ಲಿ 405 ಬಾರಿ ಉಲ್ಲಂಘಿಸಿತ್ತು. ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನದಿಂದ ನಡೆದ ಕದನ ವಿರಾಮ ಉಲ್ಲಂಘನೆಯಿಂದ ಕನಿಷ್ಠ 23 ಮಂದಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಗೃಹ ಸಚಿವಾಲಯ ಕಳೆದ ವಾರ ನೀಡಿದ ಆರ್‌ಟಿಐ ಉತ್ತರವೊಂದರಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News