ರಾಜಸ್ಥಾನ:ಉರಿಯುತ್ತಿದ್ದ ಮನೆಗಳ ಮುಂದೆ ಸೆಲ್ಫಿ ತೆಗೆದುಕೊಂಡ ಬಿಜೆಪಿ ಶಾಸಕ

Update: 2017-05-11 12:09 GMT

ಹೊಸದಿಲ್ಲಿ,ಮೇ 11: ಬೆಂಕಿಯ ಜ್ವಾಲೆಗಳ ನಡುವೆ ಉರಿಯುತ್ತಿದ್ದ ಮನೆಗಳೆದುರು ಸೆಲ್ಫಿ ತೆಗೆದುಕೊಂಡು, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಮೂಲಕ ರಾಜಸ್ಥಾನದ ಬಯನಾ ಕ್ಷೇತ್ರದ ಬಿಜೆಪಿ ಶಾಸಕ ಬಚ್ಚು ಸಿಂಗ್ ವಿವಾದದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರ ಪೋಸ್ಟ್‌ನ್ನು ಫೇಸ್‌ಬುಕ್ಕಿಗರು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.

ಅದು ಸೆಲ್ಫಿ ತೆಗೆದುಕೊಳ್ಳುವ ಸಂದರ್ಭವಾಗಿರಲಿಲ್ಲ ಎಂದು ಓರ್ವ ಫೇಸ್‌ಬುಕ್ ಬಳಕೆದಾರ ವಿಷಾದಿಸಿದರೆ, ಸೆಲ್ಫಿ ತೆಗೆದುಕೊಳ್ಳುವ ಬದಲು ಬೆಂಕಿಯನ್ನು ನಂದಿಸಲು ಶಾಸಕರು ಎರಡು ಬಕೆಟ್ ನೀರೆರಚಿದ್ದರೆ ಒಳ್ಳೆಯದಿತ್ತು ಎಂದು ಇನ್ನೋರ್ವ ಕಿಚಾಯಿಸಿದ್ದಾನೆ.

ಮಂಗಳವಾರ ತನ್ನ ಮತಕ್ಷೇತ್ರದಲ್ಲಿ ಕೆಲವು ಮನೆಗಳಿಗೆ ಬೆಂಕಿ ಹತ್ತಿರುವ ಮಾಹಿತಿ ಪಡೆದ ಸಿಂಗ್ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದರು ಮತ್ತು ತಹಶೀಲ್ದಾರ್ ಮತ್ತಿತರ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದಿಂದ ಘಟನೆಯ ವಿವರಗಳನ್ನು ಪಡೆದು ಕೊಂಡಿದ್ದರು.

 ಎಲ್ಲ ಅಗತ್ಯ ನೆರವು ಒದಗಿಸುವುದಾಗಿ ಸಂತ್ರಸ್ತರಿಗೆ ಭರವಸೆ ನೀಡಿದ ಸಿಂಗ್ ಬಳಿಕ ಸೆಲ್ಫಿ ಕ್ಲಿಕ್ಕಿಸಲು ಜೇಬಿನಿಂದ ತನ್ನ ಮೊಬೈಲ್ ಫೋನ್ ಹೊರಕ್ಕೆ ತೆಗೆದಿದ್ದರು. ಅವರ ಈ ನಡೆ ಅಲ್ಲಿದ್ದ ಹೆಚ್ಚಿನವರಿಗೆ ಅಚ್ಚರಿಯನ್ನುಂಟು ಮಾಡಿತ್ತಾದರೂ ಯಾರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ.

ಆದರೆ ಸಿಂಗ್ ತನ್ನ ಸೆಲ್ಫಿಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಬೆನ್ನಿಗೇ ಅಸಮಾಧಾನದ ಪ್ರತಿಕ್ರಿಯೆಗಳು ಬರತೊಡಗಿದ್ದವು.

ಆರಂಭದಲ್ಲಿ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಅವರು ಪ್ರಯತ್ನಿಸಿದರಾದರೂ ಬಳಿಕ ಪೋಸ್ಟ್‌ನ್ನು ತನ್ನ ಅಕೌಂಟ್‌ನಿಂದ ತೆಗೆದುಹಾಕಿದ್ದರು.

ಈ ಕುರಿತು ಸುದ್ದಿಸಂಸ್ಥೆಯ ಪ್ರಶ್ನೆಗೆ ಉತ್ತರಿಸಿರುವ ಸಿಂಗ್,ಅದು ಅವರವರ ಅಭಿಪ್ರಾಯವಷ್ಟೇ...ನಾನು ಸ್ಥಳದಲ್ಲಿರುವುದು ಆಡಳಿತಾತ್ಮಕ ಅಧಿಕಾರಿಗಳಿಗೆ ಗೊತ್ತಾಗಲೆಂದು ನಾನು ಚಿತ್ರವನ್ನು ಪೋಸ್ಟ್ ಮಾಡಿದ್ದೆ. ಸಂಬಂಧಿಸಿದ ಉಪ ವಿಭಾಗಾಧಿಕಾರಿಗಳು ನನ್ನ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಬಳಿಕ ಎಡಿಎಂಗೆ ಕರೆ ಮಾಡಿ ನಾನು ಸ್ಥಳದಲ್ಲಿದ್ದೇನೆ. ನೀವು ಸಕಾಲದಲ್ಲಿ ಬಂದು ಕ್ರಮವನ್ನು ಕೈಗೊಳ್ಳುವಂತೆ ನೇರ ಚಿತ್ರಗಳನ್ನು ಕಳುಹಿಸುತ್ತಿದ್ದೇನೆ ಎಂದು ತಿಳಿಸಿದ್ದೆ ಎಂದಿದ್ದಾರೆ. ಅದು ಸೆಲ್ಫಿಯಾಗಿರಲಿಲ್ಲ. ಅಂತಹ ದುರದೃಷ್ಟಕರ ಘಟನೆಯ ಸೆಲ್ಫಿಯನ್ನು ನಾನು ಏತಕ್ಕೆ ತೆಗೆಯುತ್ತೇನೆ ಎಂದು ಮರುಪ್ರಶ್ನೆಯನ್ನೂ ಎಸೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News