ಅಬಕಾರಿ ಇಲಾಖೆಯಿಂದ ದ.ಕ. ಜಿಲ್ಲೆಯ 114 ವೈನ್‌ಶಾಪ್‌ಗಳಿಗೆ ನೋಟಿಸ್

Update: 2017-05-12 04:05 GMT

ಮಂಗಳೂರು, ಮೇ 12: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯು ದ.ಕ. ಜಿಲ್ಲೆಯಲ್ಲಿ  ಹೆದ್ದಾರಿಗಳಲ್ಲಿರುವ ಅಂತಹ ಬಾರ್‌ಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿದೆ.

ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುವುದರಿಂದ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಯಲು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ 500 ಮೀಟರ್ ವ್ಯಾಪ್ತಿಯಲ್ಲಿ (ನಗರ ಪ್ರದೇಶಗಳಲ್ಲಿ) ಎಲ್ಲ ಮದ್ಯದಂಗಡಿಗಳನ್ನು ಮುಚ್ಚಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಆದೇಶ ಹೊರಡಿಸಿತ್ತು. 2017ರ ಎಪ್ರಿಲ್ 1ರ ಬಳಿಕ ಇಂತಹ ಹೆದ್ದಾರಿಗಳಲ್ಲಿ ಯಾವುದೇ ವೈನ್‌ಶಾಪ್‌ಗಳು ಇರಬಾರದು ಎಂದೂ ಆದೇಶದಲ್ಲಿ ತಿಳಿಸಿತ್ತು. ಕೋರ್ಟ್‌ನ ಆದೇಶ ಪಾಲಿಸಲು ಅಬಕಾರಿ ಇಲಾಖೆಯವರು ಈಗಾಗಲೇ ಹೆದ್ದಾರಿಗಳಲ್ಲಿನ ಬಾರ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆದರೂ ಬಾರ್‌ಗಳ ತೆರವು ಕಾರ್ಯಾಚರಣೆಯನ್ನು ಜೂನ್ ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ದ.ಕ. ಜಿಲ್ಲೆಯ ಸುರತ್ಕಲ್, ಬೈಕಂಪಾಡಿ, ಕೂಳೂರು, ನಂತೂರು, ಪಂಪ್‌ವೆಲ್, ತೊಕ್ಕೊಟ್ಟು, ತಲಪಾಡಿ ಮೊದಲಾದ ಪ್ರದೇಶಗಳಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ಯದಂಗಡಿಗಳಿದ್ದು, ಸುಪ್ರೀಂ ಕೋರ್ಟ್ ಆದೇಶ ಜಾರಿಯಾದರೆ ಬಹುತೇಕ ಮದ್ಯದಂಗಡಿಗಳು ತೆರವುಗೊಳ್ಳಲಿವೆ.

ದ.ಕ. ಜಿಲ್ಲೆಯ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಒಟ್ಟು 319 ಪರವಾನಿಗೆ ಹೊಂದಿರುವ ಮದ್ಯದಂಗಡಿಗಳು ಇದ್ದು, ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲೇ 114 ಮದ್ಯದಂಗಡಿಗಳಿಗೆ ನೋಟಿಸ್ ನೀಡಲಾಗಿದೆ. 20 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯ ಪ್ರದೇಶದಲ್ಲಿ ಹೆದ್ದಾರಿಯ 220 ಮೀ. ವ್ಯಾಪ್ತಿಯಲ್ಲೂ ಹಾಗೂ ನಗರ ಪ್ರದೇಶಗಳಲ್ಲಿ 500 ಮೀಟರ್ ವ್ಯಾಪ್ತಿಯಲ್ಲಿನ ಮದ್ಯದಂಗಡಿಗಳನ್ನು ಕೋರ್ಟ್ ಆದೇಶದಂತೆ ತೆರವುಗೊಳಿಸುವುದಾಗಿ ಅಬಕಾರಿ ಇಲಾಖೆಯ ನಿರೀಕ್ಷಕಿ ಸೀಮಾ ಮರಿಯಾ ತಿಳಿಸಿದ್ದಾರೆ.

# ಜೂನ್ ಬಳಿಕ ತೆರವು ಕಾರ್ಯಾಚರಣೆ: ಉಪ ಆಯುಕ್ತೆ

ಪರವಾನಿಗೆ ಹೊಂದಿರುವ ಮದ್ಯದಂಡಿಗಳನ್ನು ತೆರವುಗೊಳಿಸಲು ಜೂನ್‌ವರೆಗೆ ಅವಕಾಶವಿದ್ದು, ಆ ಬಳಿಕ ತೆರವುಗೊಳ್ಳದವುಗಳ ವಿರುದ್ಧ ಕಾರ್ಯಾಚರಣೆ ಆರಂಭಿಸುವುದಾಗಿ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಖುರ್ಷಿದಾ ಬೇಗಂ ತಿಳಿಸಿದ್ದಾರೆ.

ಲೈಸೆನ್ಸ್ ಹೊಂದಿರುವ ಮದ್ಯದಂಗಡಿಗಳ ಪರವಾನಿಗೆಗಳು ಜೂನ್‌ವರೆಗೆ ಇದ್ದು, ಈ ಹಿನ್ನೆಯಲ್ಲಿ ತೆರವು ಕಾರ್ಯಾಚರಣೆಯನ್ನು ಜೂನ್ ತಿಂಗಳವರೆಗೆ ವಿಸ್ತರಿಸಲಾಗಿದೆ. ಕೋರ್ಟ್ ಆದೇಶದ ಪ್ರಕಾರ ಲೈಸೆನ್ಸ್ ಹೊಂದಿರುವ ಮದ್ಯದಂಗಡಿಗಳಿಗೆ ಮಾರ್ಚ್ ತಿಂಗಳಿನಿಂದಲೇ ನೋಟಿಸ್ ನೀಡುವ ಪ್ರಕ್ರಿಯೆ ಜಾರಿಗೊಳಿಸಿರುವುದಾಗಿ ಅವರು ತಿಳಿಸಿದ್ದಾರೆ.

Writer - ಅಬ್ದುಲ್ ಶುಕೂರ್ ಮಲ್ಪೆ

contributor

Editor - ಅಬ್ದುಲ್ ಶುಕೂರ್ ಮಲ್ಪೆ

contributor

Similar News