ಉತ್ತರಪ್ರದೇಶದಲ್ಲಿ ಎಮ್ಮೆಯನ್ನು ಕಡಿದ ಆರೋಪ: ಯುವಕನಿಗೆ ಮಾರಣಾಂತಿಕ ಹಲ್ಲೆ
Update: 2017-05-12 17:22 IST
ಲಕ್ನೊ,ಮೇ 12: ಉತ್ತರಪ್ರದೇಶದಲ್ಲಿ ಎಮ್ಮೆಯನ್ನು ಕಡಿದಿದ್ದಾನೆಂದು ಆರೋಪಿಸಿ ಯುವಕನನ್ನು ಜನರಗುಂಪು ಮಾರಣಾಂತಿಕವಾಗಿ ಥಳಿಸಿದೆ.ಅಲಿಗಡದ ಅಚ್ಚಲ್ ತಾಲ್ ಪ್ರದೇಶದಲ್ಲಿ ಈತ ಎಮ್ಮೆ ಕಡಿದು ಮಾಂಸ ಮಾಡುತ್ತಾನೆ ಎಂದು ಸ್ಥಳೀಯರು ತಿಳಿಸಿದ್ದರಿಂದ ಬಂದ ಜನರಗುಂಪು ಯುವಕನಿಗೆ ಹೊಡೆದಿದೆ. ವಿಷಯ ತಿಳಿದು ಬಂದ ಪೊಲೀಸರು ಜನರಿಂದ ಯುವಕನನ್ನು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ.
ಯುವಕನನ್ನು ಥಳಿಸಿದ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಉತ್ತರಪ್ರದೇಶದಲ್ಲಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಹಲವಾರು ಬೀಫ್ ಮಾರಾಟ ಕೇಂದ್ರಗಳನ್ನು ಮುಚ್ಚಲಾಗಿದೆ.ಗೋರಕ್ಷಕರ ದೌರ್ಜನ್ಯ ಮಿತಿಮೀರುತ್ತಿದೆ. 2015ರಲ್ಲಿ ಉತ್ತರಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿ 50ವರ್ಷದ ವ್ಯಕ್ತಿಯೊಬ್ಬರನ್ನು ಜನರಗುಂಪು ಹೊಡೆದು ಕೊಂದು ಹಾಕಿತ್ತು.