×
Ad

ತಿರುಚುವಿಕೆ ಪದದ ವ್ಯಾಖ್ಯಾನದ ಚರ್ಚೆಗಷ್ಟೇ ಸೀಮಿತವಾದ ಸರ್ವಪಕ್ಷ ಸಭೆ: ಆಪ್ ಟೀಕೆ

Update: 2017-05-12 21:28 IST

 ಹೊಸದಿಲ್ಲಿ, ಮೇ 12: ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ವಿಶ್ವಸನೀಯತೆ ಕುರಿತು ಚರ್ಚಿಸಲು ಚುನಾವಣಾ ಆಯೋಗ ಆಯೋಜಿಸಿದ್ದ ಸರ್ವಪಕ್ಷಗಳ ಸಭೆ ‘ತಿರುಚುವಿಕೆ’ ಪದದ ವ್ಯಾಖ್ಯಾನದ ಕುರಿತ ಚರ್ಚೆಗೇ ಸೀಮಿತವಾಯಿತು. ಇಎಂವಿಗಳನ್ನು ತಿರುಚುವ ಪ್ರಾತ್ಯಕ್ಷಿಕೆ ನಡೆಸುವ ನಮ್ಮ ಪ್ರಸ್ತಾವನೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ ಎಂದು ಆಮ್ ಆದ್ಮಿ ಪಕ್ಷ (ಆಪ್) ತಿಳಿಸಿದೆ.

  ಮತಯಂತ್ರಗಳ ‘ಹ್ಯಾಕಥಾನ್’ (ತಿರುಚುವ ಪ್ರಾತ್ಯಕ್ಷಿಕೆ) ನಡೆಸುವ ತನ್ನ ಪ್ರಸ್ತಾವನೆಯ್ನು ಚುನಾವಣಾ ಆಯೋಗ ತಿರಸ್ಕರಿಸಿದೆ ಎಂದು ಸರ್ವಪಕ್ಷಗಳ ನೇತೃತ್ವ ವಹಿಸಿದ್ದ ‘ಆಪ್’ ಹೇಳಿಕೊಂಡಿದೆ. ಈ ಬಗ್ಗೆ ದಿಲ್ಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯ ಟ್ವೀಟ್ ಮಾಡಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಬಳಸಲಾದ ಇಎಂವಿಗಳನ್ನು ತಿರುಚಲಾಗಿದೆ ಎಂಬ ಹೇಳಿಕೆಗೆ ಪುರಾವೆ ಒದಗಿಸುವಂತೆ ಚುನಾವಣಾ ಆಯೋಗ ಪಕ್ಷಗಳಿಗೆ ಸವಾಲೆಸೆಯಿತು ಅಷ್ಟೇ ಎಂದು ಸಿಸೋಡಿಯ ಹೇಳಿದ್ದಾರೆ. ಇಎಂವಿ ಕುರಿತು ಪಕ್ಷಗಳಿಗಿರುವ ಕಳವಳವನ್ನು ನಿವಾರಿಸುವ ಯತ್ನ ಸಭೆಯಲ್ಲಿ ನಡೆಯಲಿಲ್ಲ. ತಿರುಚುವಿಕೆ ಪದದ ವ್ಯಾಖ್ಯಾನದ ಚರ್ಚೆಗಷ್ಟೇ ಸಭೆ ಸೀಮಿತವಾಯಿತು . ಇಎಂವಿ ಯಂತ್ರಗಳನ್ನು ಮುಟ್ಟಲು ಆಯೋಗ ದವರು ಬಿಡಲಿಲ್ಲ. ಅವರು ಬಹಳ ಚಾಣಾಕ್ಷರು ಎಂದು ‘ಆಪ್’ ಶಾಸಕ ಸೌರಭ್ ಭಾರದ್ವಾಜ್ ಮಾಧ್ಯಮದವರಿಗೆ ತಿಳಿಸಿದರು. ಸಿಪಿಐ, ಆರ್‌ಜೆಡಿ, ಆರ್‌ಎಲ್‌ಡಿ ಪಕ್ಷದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದು ಇಎಂವಿ ಯಂತ್ರದ ವಿಶ್ವಾಸಾರ್ಹತೆ ಮತ್ತಿತರ ಚುನಾವಣಾ ಪ್ರಕ್ರಿಯೆ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

  ನಮ್ಮ ಕಳವಳ ಇಎಂವಿಗಳ ವಿಶ್ವಾಸಾರ್ಹತೆ ಮತ್ತು ಚರಿತ್ರೆಯ ಕುರಿತಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಯಾಕೆ ಇವನ್ನು ಬಳಸುತ್ತಿಲ್ಲ ಎಂಬ ನಮ್ಮ ಪ್ರಶ್ನೆ ನಮ್ಮದು ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅತುಲ್ ಅಂಜನ್ ತಿಳಿಸಿದ್ದಾರೆ. ಮತಯಂತ್ರಗಳು ದೋಷರಹಿತವಾಗಿವೆ ಎಂಬುದನ್ನೇ ಪದೇ ಪದೇ ಹೇಳುವ ಮೂಲಕ ಚುನಾವಣಾ ಆಯೋಗ ಈ ಯಂತ್ರಗಳ ಪಾಲಕರಂತೆ ವರ್ತಿಸುತ್ತಿದೆ ಎಂದು ಆರ್‌ಜೆಡಿ ವಕ್ತಾರ ಮನೋಜ್ ಝಾ ಟೀಕಿಸಿದ್ದಾರೆ.

 ಮುಖ್ಯ ಚುನಾವಣಾ ಅಯುಕ್ತ ನಸೀಮ್ ಝೈದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಏಳು ರಾಷ್ಟ್ರೀಯ ಪಕ್ಷಗಳು, 37 ಪ್ರಾದೇಶಿಕ ಪಕ್ಷಗಳ ಸದಸ್ಯರು ಪಾಲ್ಗೊಂಡಿದ್ದರು.

 ಎಂವಿಗಳ ಭದ್ರತಾ ವ್ಯವಸ್ಥೆಯ ಕುರಿತು ವಿವರವಾದ ಪ್ರಾತ್ಯಕ್ಷಿಕೆಯನ್ನು ಚುನಾವಣಾ ಆಯೋಗ ಏರ್ಪಡಿಸುವ ಮೂಲಕ ಈ ಯಂತ್ರಗಳನ್ನು ತಿರುಚಲು ಅಸಾಧ್ಯ ಎಂದು ರುಜುವಾತು ಪಡಿಸಲಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

  ಇತ್ತೀಚೆಗೆ ಕೆಲವು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಗಳಲ್ಲಿ ಇಎಂವಿಗಳನ್ನು ತಿರುಚುವ ಮೂಲಕ ಬಿಜೆಪಿ ಅಧಿಕಾರ ಗಳಿಸಿದೆ ಎಂದು ದೂರಿದ್ದ ವಿರೋಧ ಪಕ್ಷಗಳು, ಇಎಂವಿಗಳನ್ನು ನಿಷೇಧಿಸುವಂತೆ ಮತ್ತು ಈ ಹಿಂದಿನಂತೆಯೇ ಮತಪತ್ರ ವ್ಯವಸ್ಥೆ ಅಳವಡಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News