ಭವಿಷ್ಯದ ಎಲ್ಲ ಚುನಾವಣೆಗಳಲ್ಲಿ ಮತದಾನ ದೃಢೀಕರಣ ವ್ಯವಸ್ಥೆ ಕಡ್ಡಾಯ: ಚು.ಆಯೋಗ

Update: 2017-05-12 18:24 GMT

ಹೊಸದಿಲ್ಲಿ,ಮೇ 12: ಭವಿಷ್ಯದ ಎಲ್ಲ ಚುನಾವಣೆಗಳು ಮತದಾನ ದೃಢೀಕರಣ ವ್ಯವಸ್ಥೆ (ವಿವಿಪಿಎಟಿ)ಯನ್ನು ಅಳವಡಿಸಿದ ವಿದ್ಯುನ್ಮಾನ ಮತದಾನ ಯಂತ್ರಗಳ ಮೂಲಕವೇ ನಡೆಯಲಿವೆ ಎಂದು ಚುನಾವಣಾ ಆಯೋಗವು ಶುಕ್ರವಾರ ತಿಳಿಸಿದೆ. ವಿವಿಪಿಎಟಿಯಿಂದಾಗಿ ಮತದಾರ ತನ್ನ ಮತವು ತಾನು ಆಯ್ಕೆ ಮಾಡಿದ್ದ ಅಭ್ಯರ್ಥಿಗೆ ಬಿದ್ದಿರುವುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಮತ್ತು ಇವಿಎಂಗಳಲ್ಲಿ ಹಸ್ತಕ್ಷೇಪದ ಯಾವುದೇ ಸಾಧ್ಯತೆಯು ನಿವಾರಣೆಯಾಗುತ್ತದೆ.

ಇಂದಿಲ್ಲಿ ಸರ್ವಪಕ್ಷ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ವಿಷಯವನ್ನು ತಿಳಿಸಿದ ಮುಖ್ಯ ಚುನಾವಣಾ ಆಯುಕ್ತ ನಸೀಂ ಝೈದಿ ಅವರು, ಈ ವರ್ಷದ ಆರಂಭದಲ್ಲಿ ನಡೆದಿದ್ದ ಪಂಚರಾಜ್ಯ ಚುನಾವಣೆಗಳಲ್ಲಿ ಬಳಕೆಯಾಗಿದ್ದ ಇವಿಎಂಗಳನ್ನು ತಿರುಚಲಾಗಿತ್ತು ಎಂಬ ತಮ್ಮ ಪ್ರತಿಪಾದನೆಯನ್ನು ಸಿದ್ಧಪಡಿಸುವಂತೆ ರಾಜಕೀಯ ಪಕ್ಷಗಳಿಗೆ ಸವಾಲನ್ನು ಆಯೋಗವು ಒಡ್ಡಲಿದೆ ಮತ್ತು ಪ್ರಾತ್ಯಕ್ಷಿಕೆ ನಡೆಸಲು ಆ ಇವಿಎಂಗಳನ್ನೇ ನೀಡಲಿದೆ ಎಂದು ಹೇಳಿದರು.

ಈ ವರ್ಷದ ಮಾ.11ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಬಿಎಸ್‌ಪಿ, ಆಪ್, ಕಾಂಗ್ರೆಸ್ ಮತ್ತು ಟಿಎಂಸಿ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಇವಿಎಂಗಳ ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳನ್ನೆತ್ತಿದ್ದವು.

ಈ ವರ್ಷದ ಉತ್ತರಾರ್ಧದಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಮಧ್ಯಪ್ರದೇಶ, ಛತ್ತೀಸ್‌ಗಡ, ಮೇಘಾಲಯ ಮತ್ತು ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳೂ ಸನ್ನಿಹಿತವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News