​ಬಿಲ್ಕೀಸ್ ಬಾನು ಪ್ರಕರಣದ ದೋಷಿಗಳಿಗೆ ಕಠಿಣ ಶಿಕ್ಷೆ ಅಗತ್ಯ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

Update: 2017-05-12 18:52 GMT

ಹೊಸದಿಲ್ಲಿ, ಮೇ 12: 2002ರ ಗುಜರಾತ್ ಹತ್ಯಾಕಾಂಡದಲ್ಲಿ ಗರ್ಭಿಣಿ ಬಿಲ್ಕೀಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಮತ್ತು ಆಕೆಯ ಕುಟುಂಬದ 14 ಮಂದಿಯನ್ನು ಹತ್ಯೆಗೈದ 11 ಮಂದಿ ಅಪರಾಧಿಗಳಿಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿರುವ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯು ಸ್ವಾಗತಿಸಿದೆ.

ವಿಚಾರಣಾ ನ್ಯಾಯಾಲಯವು ಖುಲಾಸೆಗೊಳಿಸಿದ್ದ ಪೊಲೀಸ್ ಅಧಿಕಾರಿಗಳನ್ನೂ ಅಪರಾಧಿಗಳೆಂದು ಘೋಷಿಸಿರುವುದು ಧನಾತ್ಮಕ ಅಂಶವಾಗಿದೆ. ಈ ಘೋರ ಕೃತ್ಯದಲ್ಲಿ ಭಾಗಿಯಾದ ಎಲ್ಲರಿಗೂ ಅತ್ಯಂತ ಕಠಿಣ ಶಿಕ್ಷೆಯಾಗಬೇಕೆಂದು ಸಭೆಯು ಅಭಿಪ್ರಾಯಿಸಿದೆ. ಬಿಲ್ಕೀಸ್ ಬಾನು ಪ್ರಕರಣದಲ್ಲಿ ನ್ಯಾಯಾಲಯದ ಈ ತೀರ್ಪು ಅಸಮರ್ಪಕವಾಗಿದೆ. 2012ರಲ್ಲಿ "ನಿರ್ಭಯಾ" ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಗಲ್ಲುಶಿಕ್ಷೆಯನ್ನು ಪ್ರಕಟಿಸಿದ್ದು, ಬಿಲ್ಕೀಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿಯೂ ಇದೇ ರೀತಿಯ ಶಿಕ್ಷೆಯಾಗಬೇಕಾಗಿದೆ. ಈ ಪ್ರಕರಣದಲ್ಲಿ ಅಪರಾಧ ಸಾಬೀತಾದ ವ್ಯಕ್ತಿಗಳನ್ನು ಸೂಕ್ತ ಶಿಕ್ಷೆಗೆ ಗುರಿಪಡಿಸುವ ನಿಟ್ಟಿನಲ್ಲಿ ಪ್ರಕರಣದ ಕುರಿತಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಬೇಕೆಂದು ಸಮಿತಿಯು ಸರಕಾರವನ್ನು ಒತ್ತಾಯಿಸಿದೆ.

ಹೈಕೋರ್ಟ್‌ನ ನ್ಯಾಯಾಧೀಶರಾಗಿರುವ ಜಸ್ಟಿಸ್ ಕರ್ಣನ್‌ರವರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಸುಪ್ರೀಂ ಕೋರ್ಟ್ ಅವರಿಗೆ 6 ತಿಂಗಳ ಶಿಕ್ಷೆಯನ್ನು ಪ್ರಕಟಿಸಿದೆ. ಜಸ್ಟಿಸ್ ಕರ್ಣನ್‌ರವರು ತನ್ನ ಸಹೋದ್ಯೋಗಿ ನ್ಯಾಯಾಧೀಶರ ವಿರುದ್ಧ ಧ್ವನಿ ಎತ್ತಿದ್ದರು. ಇದೇ ವೇಳೆ ಮಹಾಭಿಯೋಗದ ಪರಿಗಣನೆಗೆ ಈ ಪ್ರಕರಣವನ್ನು ಸಂಸತ್ತಿಗೆ ಕಳುಹಿಸುವ ಅಗತ್ಯ ಸುಪ್ರೀಂ ಕೋರ್ಟ್‌ಗೆ ಇತ್ತೇ? ಈ ಪ್ರಕರಣವನ್ನು ಜಸ್ಟಿಸ್ ಕರ್ಣನ್‌ರವರ ನಿವೃತ್ತಿಯವರೆಗೆ ಕೈ ಬಿಡಲು ಸುಪ್ರೀಂ ಕೋರ್ಟ್‌ಗೆ ಸಾಧ್ಯವಿರಲಿಲ್ಲವೇ? ಇಂತಹ ಕೆಲವೊಂದು ಪ್ರಶ್ನೆಗಳೂ ಇಲ್ಲಿ ಉದ್ಭವಿಸುತ್ತಿವೆ.

ಮಾತ್ರವಲ್ಲದೆ, ಜ.ಕರ್ಣನ್‌ರವರ ಹೇಳಿಕೆಗಳನ್ನು ಪ್ರಕಟಿಸಲು ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿರುವುದು ನ್ಯಾಯಾಂಗದ ಸೆನ್ಸಾರ್‌ಶಿಪ್‌ನಂತಿದೆ. ಜ.ಕರ್ಣನ್‌ರವರ ವಿರುದ್ಧ ಈ ವಿಚಾರಣೆಯು ಯಾವುದೇ ರೀತಿಯ ವಿರೋಧದ ಧ್ವನಿಯನ್ನು ಅಡಗಿಸುವ ಒಂದು ಪ್ರಯತ್ನವಾಗಿದೆ. ಅದೇ ರೀತಿ ಕರ್ಣನ್ ಆರೋಪಿಸಿರುವಂತೆ, ನ್ಯಾಯಾಧೀಶರಲ್ಲಿರುವ ಭ್ರಷ್ಟಾಚಾರ ಮತ್ತು ವ್ಯಾಪಕ ಜಾತಿ ತಾರತಮ್ಯದ ಕುರಿತು ಕಾನೂನು ವಲಯ ಮತ್ತು ನಾಗರಿಕ ಸಮಾಜ ಗಮನಹರಿಸಬೇಕೆಂದು ಪಿಎಫ್ ಐ ಹೇಳಿದೆ.

ಜಮೀಯತೆ ಉಲಮಾ ಎ ಹಿಂದ್‌ನ ನೇತತ್ವದಲ್ಲಿ ಪ್ರಧಾನ ಮಂತ್ರಿಯವರನ್ನು ಭೇಟಿಯಾದ ಕುರಿತು ಉಲ್ಲೇಖಿಸಿದ ಸಭೆಯು, ಈ ಕುರಿತು ಈ ಹಿಂದೆ ನಡೆದ ಮೂವರು ಪ್ರತಿನಿಧಿಗಳ ಸಭೆಯಲ್ಲಿ ತೆಗೆದ ಸರ್ವಾನುಮತದ ತೀರ್ಮಾನದಂತೆ ಮುಸ್ಲಿಮ್ ಸಮುದಾಯದ ವಿವಿಧ ವರ್ಗಗಳ ನಾಯಕರು ಮುಂದುವರಿಯಬೇಕಾಗಿತ್ತು ಎಂದು ಅಭಿಪ್ರಾಯಿಸಿದೆ. ಈ ಭೇಟಿಯು ಪ್ರಧಾನಮಂತ್ರಿ ಕಡೆಯಿಂದ ಕರೆದಿರಲಾಗಿರಲಿಲ್ಲ, ಬದಲಾಗಿ ಜಮೀಯತ್ ಉಲೇಮಾ ನಾಯಕರ ಮನವಿಯ ಹಿನ್ನೆಲೆಯಲ್ಲಿ ನಿಗದಿಪಡಿಸಲಾಗಿತ್ತು ಎಂಬುದು ಮಾಧ್ಯಮ ವರದಿಗಳಿಂದ ತಿಳಿದು ಬಂದಿದೆ.

ಬಿಜೆಪಿ ಸರಕಾರದ ಸಂರಕ್ಷಣೆಯಲ್ಲಿ ಸಂಘಪರಿವಾರದ ಗೂಂಡಾಗಳು ದೇಶದಲ್ಲಿ ಮುಸ್ಲಿಮರ ಮೇಲೆ ಮಾರಣಾಂತಿಕ ದಾಳಿಗಳನ್ನು ನಡೆಸುತ್ತಿದ್ದಾರೆ. ಈ ಮೂಲಕ ಮುಸ್ಲಿಮರ ಮಧ್ಯೆ ಸಷ್ಟಿಸಲಾಗಿರುವ ಭೀತಿ ಮತ್ತು ಅಭದ್ರತೆಯ ವಾತಾವರಣವನ್ನು ದೂರ ಮಾಡಲು ಪ್ರಧಾನಿಯು ಯಾವ ರೀತಿಯ ವಿಶೇಷ ಕಾರ್ಯಯೋಜನೆಗಳನ್ನು ಖಾತರಿಪಡಿಸಿದ್ದಾರೆ ಎಂಬುದನ್ನು ತಿಳಿಯುವ ಹಕ್ಕನ್ನು ಮುಸ್ಲಿಂ ಸಮಾಜವು ಹೊಂದಿದೆ ಎಂದು ಸಭೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News