ನನಗೆ ಕಾಣಿಸುತ್ತಿಲ್ಲ ಎಂದಾಗ ಈ ವಯಸ್ಸಲ್ಲಿ ಏನನ್ನೂ ನೋಡಬೇಕಿಲ್ಲ ಎಂದರು ಮಕ್ಕಳು : ಮೆಹರುನ್ನಿಸಾ

Update: 2017-05-13 10:26 GMT

ನಿನಗೇಕೆ ಅಷ್ಟೊಂದು ನೋವಿದೆ, ಸದಾಕಾಲವೂ ಏಕೆ ನರಳುತ್ತಿರುತ್ತೀಯಾ ಎಂದು ಅವರು ನನ್ನನ್ನು ಕೇಳಿದರು. ನನ್ನ ಮಂಡಿನೋವು, ಚರ್ಮದಲ್ಲಿ ತುರಿಕೆ ಆಥವಾ ಈ ಘಳಿಗೆಯಲ್ಲಿ ನನ್ನ ಹೃದಯದಲ್ಲಿ ಕಾಣಿಸಿಕೊಂಡಿರುವ ತೀವ್ರ ನೋವು...ಇವುಗಳ ಬಗ್ಗೆಯೂ ಹೇಳಿಕೊಳ್ಳಲು ನನಗೆ ಇರಿಸುಮುರಿಸಾಗುತ್ತಿದೆ, ಅವಮಾನದಿಂದ ಕುಗ್ಗಿ ಹೋಗುತ್ತಿದ್ದೇನೆ. ಈಗಲೂ ನನ್ನ ಮಕ್ಕಳು ನನಗೇನೂ ಹೇಳಬೇಕಿಲ್ಲ, ನನ್ನ ದೃಷ್ಟಿ ಮಂಜಾಗಿದ್ದರೂ ಅವರ ಮುಖಗಳನ್ನು ನೋಡಿಯೇ ನಾನು ಎಲ್ಲವನ್ನೂ ಹೇಳಬಲ್ಲೆ.

ಇತ್ತೀಚಿಗೆ ನನಗೆ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ ಎಂದು ನಾನು ನನ್ನ ಮಕ್ಕಳಿಗೆ ಹೇಳಿದಾಗ, ಈ ಮುದಿ ವಯಸ್ಸಿನಲ್ಲಿ ಏನನ್ನಾದರೂ ನೋಡುವ ಅಗತ್ಯವಿಲ್ಲ ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದ್ದರು. ಆದರೆ ನಾನು ನಿಜಕ್ಕೂ ನನ್ನ ಸುತ್ತಲಿನ ಜಗತ್ತನ್ನು, ವಿಶೇಷವಾಗಿ ನನ್ನ ಮಕ್ಕಳ ಮುಖಗಳನ್ನು ನೋಡಲು ಬಯಸುತ್ತೇನೆ.

ನನ್ನ ಹಿರಿಯ ಮಗನಿಗೆ ಆರು ತಿಂಗಳುಗಳಾಗಿದ್ದಾಗ ಅವನೇಕೆ ಸದಾ ನನ್ನ ಮುಖವನ್ನೇ ನೋಡುತ್ತಾನೆ....ನನ್ನನ್ನೇಕೆ ಅಷ್ಟೊಂದು ಪ್ರೀತಿಸುತ್ತಾನೆ ಎಂದು ಅಚ್ಚರಿಪಟ್ಟಿದ್ದೆ. ಆದರೆ ಈಗ ಯಾರಿಗೂ ಸಮಯವೇ ಇಲ್ಲ. ಕೊನೆಯ ಬಾರಿ ಯಾವಾಗ ನನ್ನ ಮಕ್ಕಳು ನನ್ನ ಮುಖವನ್ನು ನೋಡಿದ್ದರು ಅಥವಾ ನನ್ನ ಪಕ್ಕದಲ್ಲಿ ಕುಳಿತು ನನ್ನ ಮಾತುಗಳನ್ನು ಕೇಳಿದ್ದರು ಎನ್ನುವುದನ್ನು ನನಗೆ ನೆನಪಿಲ್ಲ.

ಅವರೊಂದಿಗೆ ಮಾತನಾಡಲು ನಾನು ಇಷ್ಟ ಪಡುತ್ತೇನೆ, ಆದರೆ ನಾನು ಮಾತನಾಡುವ ಮುನ್ನವೇ ಅವರು ಅದನ್ನು ನಿಲ್ಲಿಸಿಬಿಡುತ್ತಾರೆ. ಪ್ರತಿಯೊ ಬ್ಬರೂ ತಮ್ಮ ಕೆಲಸಗಳಲ್ಲಿ ವ್ಯಸ್ತರಾಗಿದ್ದಾರೆ, ಅವರಿಗೆ ತಮ್ಮದೇ ಆದ ಬದುಕಿದೆ.... ನನ್ನೊಬ್ಬಳನ್ನು ಹೊರತುಪಡಿಸಿ.

ಕಳೆದೊಂದು ವರ್ಷದಿಂದ ಚಹಾ ಸೇವನೆಯನ್ನು ನಾನು ನಿಲ್ಲಿಸಿದ್ದೇನೆ. ಹಾಲು,ಚಹಾ ಆರೋಗ್ಯಕ್ಕೆ ಕೆಟ್ಟದ್ದು ಮತ್ತು ಅವು ತುಂಬ ದುಬಾರಿ ಕೂಡ ಎಂದು ನನ್ನ ಕಿರಿಯ ಮಗಳು ಹೇಳಿದ್ದಳು. ಅವರ ಹಾಲು ಮತ್ತು ಸಕ್ಕರೆ ವ್ಯರ್ಥವಾಗುವುದು ನನಗೆ ಬೇಕಿರಲಿಲ್ಲ, ಹೀಗಾಗಿ ಚಹಾ ಸೇವನೆಯ ನನ್ನ 50 ವರ್ಷಗಳ ಅಭ್ಯಾಸವನ್ನು ಬದಲಿಸಿಕೊಂಡಿದ್ದೇನೆ.

ಕೆಲವೊಮ್ಮೆ ನನ್ನ ಮರಿಮೊಮ್ಮಗ ಬಿಸ್ಕಿಟ್ ಖರೀದಿಸಲು ದುಡ್ಡು ಕೊಡು ಎಂದು ನನ್ನನ್ನು ಕೇಳುತ್ತಾನೆ. ನನ್ನ ಬಳಿ ಹಣವೇ ಇಲ್ಲ ಎಂದು ಆತನಿಗೆ ಹೇಳುವಾಗ ನನಗೆ ತುಂಬ ನಾಚಿಕೆಯಾಗುತ್ತದೆ. ಪುಣ್ಯ, ನಾನು ಹೆಚ್ಚು ವಿವರಿಸದೆ ಅವನಿಗೆ ಎಲ್ಲವೂ ಅರ್ಥವಾಗುತ್ತದೆ. ಹೌದು,ಅಜ್ಜಿ... ನಿನ್ನ ಬಳಿ ಏನೂ ಇಲ್ಲ ಎನ್ನುತ್ತಾನೆ ಆತ. ಆತ ಹೇಳುವುದು ಸರಿ. ನನ್ನ ಬಳಿ ಏನೂ ಇಲ್ಲ ಮತ್ತು ಬಹುಶಃ ನನ್ನವರೂ ಯಾರೂ ಇಲ್ಲ.

 ನನ್ನ ಮಕ್ಕಳು ನನ್ನನ್ನು ತುಂಬ ಪ್ರೀತಿಸುತ್ತಾರೆ, ಅವರು ತಮ್ಮ ಬದುಕಿನಲ್ಲಿ ನನ್ನನ್ನು ತುಂಬ ಇಷ್ಪಡುತ್ತಾರೆ ಎಂದು ನನಗೆ ನಾನು ಸಮಾಧಾನ ಮಾಡಿಕೊಳ್ಳಲು ಕೆಲವೊಮ್ಮೆ ಪ್ರಯತ್ನಿಸುತ್ತೇನೆ. ಆದರೆ ನನ್ನೊಳಗೆ ಇರುವ, ಸದಾ ಅಳುತ್ತಲೇ ಇರುವ ಯಾರೋ ನಾನು ಸೋತಿದ್ದೇನೆ ಎಂದು ನಾನು ಭಾವಿಸುವಂತೆ ಮಾಡುತ್ತಾರೆ.

ತುಂಬ ಸೋತಿದ್ದೇನೆ ಮತ್ತು ಯಾರಿಗೂ ನಾನು ಅಗತ್ಯವಲ್ಲ ಎಂದು ನನಗೆ ಅನ್ನಿಸುತ್ತದೆ. ಪ್ರತಿಯೊಬ್ಬರಿಗೂ.... ವಿಶೇಷವಾಗಿ ನಿಮ್ಮ ಸ್ವಂತಮಕ್ಕಳಿಗೇ ನೀವು ನಿರುಪಯುಕ್ತ ವಸ್ತುವಾದಾಗ ಬದುಕಿನಲ್ಲಿ ಇನ್ನೊಂದು ದಿನವನ್ನು ಕಳೆಯುವುದು ತುಂಬ ಕಷ್ಟವಾಗಿಬಿಡುತ್ತದೆ.....ನನ್ನ ಹಾಗೆ.

-ಮೆಹರುನ್ನಿಸಾ  

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News