ಚೀನಾ ಆರ್ಥಿಕ ಕಾರಿಡಾರ್ : 10 ಕಾರ್ಮಿಕರ ಹತ್ಯೆ

Update: 2017-05-13 12:53 GMT

ಇಸ್ಲಾಮಾಬಾದ್, ಮೇ 13: ಪಾಕಿಸ್ತಾನದ 57 ಬಿಲಿಯ ಡಾಲರ್ (3,65,800 ಕೋಟಿ ರೂಪಾಯಿ) ವೆಚ್ಚದ ಚೈನೀಸ್ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯೊಂದಿಗೆ ಹೊರವಲಯದ ಪಟ್ಟಣಗಳನ್ನು ಸಂಪರ್ಕಿಸಲು ರಸ್ತೆಗಳನ್ನು ನಿರ್ಮಿಸುತ್ತಿದ್ದ 10 ಕಾರ್ಮಿಕರನ್ನು ನೈರುತ್ಯ ಪಾಕಿಸ್ತಾನದಲ್ಲಿ ಶನಿವಾರ ಗುಂಡುಹಾರಿಸಿ ಕೊಲ್ಲಲಾಗಿದೆ.

ಬಲೂಚಿಸ್ತಾನದ ಪ್ರಾಂತದಲ್ಲಿರುವ ಗ್ವಾಡರ್ ಬಂದರು ನಗರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿ ಕಾರ್ಮಿಕರ ಮೇಲೆ ದಾಳಿ ನಡೆದಿದೆ.
‘‘ಎಲ್ಲ ಕಾರ್ಮಿಕರಿಗೆ ಹತ್ತಿರದಿಂದ ಗುಂಡು ಹಾರಿಸಲಾಯಿತು’’ ಎಂದು ಅರೆಸೈನಿಕ ಪಡೆಯೊಂದರ ಹಿರಿಯ ಅಧಿಕಾರಿ ಮುಹಮ್ಮದ್ ಝರೀಫ್ ಹೇಳಿದರು. ಹಂತಕರು ಮೋಟರ್‌ಸೈಕಲ್ ಒಂದರಲ್ಲಿ ಬಂದು ಗುಂಡು ಹಾರಿಸಿ ಪರಾರಿಯಾದರು ಎಂದರು.

ಬಲೂಚಿಸ್ತಾನವು ತುಂಬಾ ಹಿಂದಿನಿಂದಲೂ ಭದ್ರತಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಾಂತದಲ್ಲಿರುವ ಪ್ರತ್ಯೇಕತಾವಾದಿಗಳು ಕೇಂದ್ರ ಸರಕಾರದ ವಿರುದ್ಧ ದಶಕಗಳಿಂದಲೂ ಸಮರ ಸಾರುತ್ತಿದ್ದಾರೆ. ಅನಿಲ ಸಮೃದ್ಧ ವಲಯದ ಸಂಪನ್ಮೂಲಗಳಲ್ಲಿ ಹೆಚ್ಚಿನ ಪಾಲು ಬೇಕು ಎನ್ನುವುದು ಅವರ ಬೇಡಿಕೆಯಾಗಿದೆ.
‘ಆರ್ಥಿಕ ಕಾರಿಡಾರ’ನ್ನು ವಿರೋಧಿಸುತ್ತಿರುವ ಉಗ್ರರು 2014ರಿಂದ 44 ಕಾರ್ಮಿಕರನ್ನು ಕೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News