ರಿಪಬ್ಲಿಕ್ 'ಬಂಡವಾಳ ಬಯಲು' ಮಾಡಿದ ಬೃಜೇಶ್ ಗೆ ಬಾಯಿಗೆ ಬಂದಂತೆ ಬೈದ ಅರ್ನಬ್

Update: 2017-05-13 15:51 GMT

ಹೊಸದಿಲ್ಲಿ, ಮೇ 13 : ಅರ್ನಬ್ ಗೋಸ್ವಾಮಿ ನೇತೃತ್ವದ ಹೊಸ ಟಿವಿ ಚಾನಲ್ ರಿಪಬ್ಲಿಕ್ ಟಿವಿ ಬಿಜೆಪಿ ಪರ ಹಾಗು ಇತರ ಪಕ್ಷಗಳ ವಿರುದ್ಧ ಎಂಬ ಆರೋಪ ಚಾನಲ್ ಪ್ರಾರಂಭವಾದ ದಿನದಿಂದಲೇ ಕೇಳಿ ಬರುತ್ತಿದೆ. ಈಗ ಈ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ನ್ಯಾಷನಲ್ ಹೆರಾಲ್ಡ್ ವಿವಾದದ ಕುರಿತಂತೆ 'ವಿಶೇಷ ತನಿಖಾ ವರದಿ' ಪ್ರಸಾರ ಮಾಡುತ್ತಿದ್ದ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಬ್ ಗೋಸ್ವಾಮಿ ಕಾಂಗ್ರೆಸ್ ವಕ್ತಾರ ಹಾಗು ಹಿರಿಯ ನ್ಯಾಯವಾದಿ ಬೃಜೇಶ್ ಕಾಳಪ್ಪ ಅವರಿಗೆ ಅತ್ಯಂತ ಅವಹೇಳನಕಾರಿ ಭಾಷೆ ಬಳಸಿ ಬೈದಿರುವುದು ವಿವಾದ ಸೃಷ್ಟಿಸಿದೆ. 

ಈ ಸಂದರ್ಭದಲ್ಲಿ ಅರ್ನಬ್ ಸಂಪಾದಕರ ಹುದ್ದೆಯ ಘನತೆ ಮರೆತು ಅತ್ಯಂತ ಕೆಟ್ಟದಾಗಿ, ಬೊಬ್ಬೆ ಹಾಕಿ ಬೃಜೇಶ್ ಅವರನ್ನು ಹುಚ್ಚ, ಮಾನಸಿಕ ಅಸ್ವಸ್ಥ , ಗಾಂಧಿ ಕುಟುಂಬದ ನಿಷ್ಠೆಯ ನಾಯಿ ಇತ್ಯಾದಿ ಪದಗಳನ್ನು ಬಳಸಿ ಜರೆದಿರುವುದಕ್ಕೆ ಪತ್ರಿಕಾ, ರಾಜಕೀಯ ಹಾಗು ಕಾನೂನು ವಲಯಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಆಗಿದ್ದಿಷ್ಟು: ರಿಪಬ್ಲಿಕ್ ಟಿವಿಯ ಯುವ ನಿರೂಪಕಿ ಬೃಜೇಶ್ ರನ್ನು ಸಂಪರ್ಕಿಸಿ ನ್ಯಾಷನಲ್ ಹೆರಾಲ್ಡ್ ಕುರಿತ ದಿಲ್ಲಿ ಉಚ್ಛ  ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯೆ ಕೇಳಿದ್ದಾರೆ. ಇದಕ್ಕೆ " ಆದಾಯ ತೆರಿಗೆ ಇಲಾಖೆ ಮಾತ್ರವಲ್ಲ ದೇಶ ವಿದೇಶಗಳ ಯಾವುದೇ ಸಂಸ್ಥೆ ಬೇಕಾದರೂ ಬಂದು ತನಿಖೆ ನಡೆಸಲಿ. ನಮಗೆ ಯಾವುದೇ ಆಕ್ಷೇಪ ಇಲ್ಲ " ಎಂದು ಬೃಜೇಶ್ ಸ್ಪಷ್ಟವಾಗಿ ಹೇಳಿದ್ದಾರೆ . 

ಆದರೆ ನಿರೂಪಕಿ ಮತ್ತೆ ಮತ್ತೆ ಬೃಜೇಶ್ ರನ್ನು ಕೆಣಕಿದಾಗ " ನಿಮ್ಮದು ಬಿಜೆಪಿ ಚಾನಲ್ ಆಗಿದ್ದರೂ ... " ( ರಿಪಬ್ಲಿಕ್ ಟಿವಿಯ ಪ್ರಮುಖ ಹೂಡಿಕೆದಾರ ಸಂಸದ ಹಾಗು ಕೇರಳದ ಎನ್ ಡಿ ಎ ಉಪಾಧ್ಯಕ್ಷ ರಾಜೀವ್ ಚಂದ್ರಶೇಖರ್ ) ಎಂದು ಬೃಜೇಶ್ ಹೇಳಿದ್ದಾರೆ. ಅಷ್ಟಕ್ಕೆ ನಿರೂಪಕಿ ತಿರುಗಿ ಬಿದ್ದಿದ್ದಾರೆ. ಆಗಲೇ ನಿರೂಪಕಿ ಜೊತೆಗೆ ಸ್ಟುಡಿಯೋದಲ್ಲಿದ್ದ ಟಿವಿಯ ಸಹಾಯಕ ಸಂಪಾದಕ ಅಭಿಷೇಕ್ , ಬೃಜೇಶ್ ರನ್ನು ಸರಿಯಾಗಿ ಉತ್ತರಿಸಿ ಎಂದು ಮರುಪ್ರಶ್ನೆ ಹಾಕಿದ್ದಾರೆ. 

ಇದಕ್ಕೆ ಬೃಜೇಶ್ ಉತ್ತರಿಸಲು ಪ್ರಯತ್ನಿಸುತ್ತಿರುವಾಗಲೇ ನ್ಯೂಸ್ ರೂಮ್ ನಿಂದ ಶೀತಲ್ ರಜಪೂತ್ ಎಂಬ ಪತ್ರಕರ್ತೆ ಅರ್ನಬ್ ಶೈಲಿಯಲ್ಲೇ ಬೃಜೇಶ್ ಮೇಲೆ ಮುಗಿ ಬಿದ್ದಿದ್ದಾರೆ. ಬೃಜೇಶ್ ಬಾಯಿಬಿಡಲು ಅವಕಾಶ ನೀಡದ ಶೀತಲ್  "ನಮ್ಮ ಚಾನಲ್ ಬಿಜೆಪಿ ಚಾನಲ್ ಎಂದಿದ್ದಕ್ಕೆ ಕ್ಷಮೆ ಯಾಚಿಸಿ" ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲಿಗೆ ಅರ್ನಬ್ ಎಂಟ್ರಿಯಾಗಿದೆ. 

ಅರ್ನಬ್ "ಷಟ್ ಅಪ್ ಬೃಜೇಶ್, ಷಟ್ ಅಪ್ ಬೃಜೇಶ್ ..." ಎನ್ನುತ್ತಲೇ ಪ್ರಾರಂಭಿಸಿ ಅತ್ಯಂತ ಕಟುವಾಗಿ, ಅವಹೇಳನಕಾರಿ ಪದಗಳನ್ನು ಬಳಸಿ ಬೃಜೇಶ್ ರನ್ನು ಜರೆದಿದ್ದಾರೆ. "ತಕ್ಷಣ ಹುಚ್ಚಾಸ್ಪತ್ರೆಗೆ ಸೇರಬೇಕು" ಎಂದು ಹಲವಾರು ಬಾರಿ ಹೇಳಿದ್ದಾರೆ. ಆದರೆ ಅರ್ನಬ್ ಮಾತು ಆರಂಭಿಸುವಾಗಲೇ ಬೃಜೇಶ್ ಕಾಲ್ ಕಟ್ ಮಾಡಿದ್ದಾರೆ. ಅದನ್ನು  ಗಮನಿಸಿಯೋ , ಇಲ್ಲದೆಯೂ ಅರ್ನಬ್ ಮಾತ್ರ ಬೃಜೇಶ್ ವಿರುದ್ಧ ಕಿಡಿಕಾರಿ ಮಾತು ಮುಗಿಸಿದ್ದಾರೆ. 

ರಾಷ್ಟ್ರ ಮಟ್ಟದ ಸುದ್ದಿ ವಾಹಿನಿಯೊಂದರ ಸಂಪಾದಕನಾಗಿ ಅರ್ನಬ್ ಮಾತನಾಡಿರುವ ಶೈಲಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ, ಆಕ್ರೋಶ ವ್ಯಕ್ತವಾಗಿದೆ. ಹೀಗೆ ಯಾವುದೇ ಹಿಂಜರಿಕೆ ಇಲ್ಲದೆ ಒಂದು ಪಕ್ಷದ ಪರವಾಗಿ ಹಾಗು ಇತರ ಪಕ್ಷಗಳ ವಿರುದ್ಧವಾಗಿ ಮಾತನಾಡಿ ಅರ್ನಬ್ ಪತ್ರಿಕೋದ್ಯಮಕ್ಕೆ ಕಳಂಕ ತಂದಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಜೊತೆಗೆ ಅರ್ನಬ್ ಟಿವಿ ಚಾನಲ್ ನ ಇತರ ನಿರೂಪಕರು, ಪತ್ರಕರ್ತರ ಅನುಭವ, ವೃತ್ತಿಪರತೆಯ ಬಗ್ಗೆಯೂ ಪ್ರಶ್ನೆಗಳೆದ್ದಿವೆ. ಒಬ್ಬನನ್ನು ಮಾತನಾಡಿಸಲು ಸ್ಟುಡಿಯೋದಲ್ಲಿದ್ದ ಇಬ್ಬರಿಗೆ ಸಾಧ್ಯವಾಗದೆ ನ್ಯೂಸ್ ರೂಮ್ ನಲ್ಲಿರುವ ಇನ್ನೊಬ್ಬರು ಅದಕ್ಕೆ ಸೇರಿಕೊಂಡರೂ, ಮೂವರಿಂದಲೂ ಅದನ್ನು ನಿಭಾಯಿಸಲು ಸಾಧ್ಯವಾಗದೆ ಅರ್ನಬ್ ಸ್ವತಃ ಬಂದು ರಾಷ್ಟ್ರೀಯ ಪಕ್ಷದ ವಕ್ತಾರರೊಬ್ಬರನ್ನು ಇಷ್ಟು ಕೆಟ್ಟದಾಗಿ ನಿಂದಿಸಿರುವುದು ಚಾನಲ್ ನ ಸಿಬ್ಬಂದಿಯ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡಿಸಿದೆ ಎಂಬ ಮಾತುಗಳೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿವೆ.  

ರಿಪಬ್ಲಿಕ್ ಚಾನಲ್ ನವರು ಕರೆದರೆ ಹೋಗಲೇಬೇಕು ಎಂದಿಲ್ಲ. ಅದು ನ್ಯಾಯಾಲಯ ಅಲ್ಲ. ಹಾಗಾಗಿ ಆ ಚಾನಲ್ ಅನ್ನು ಬಿಜೆಪಿಯೇತರ ಪಕ್ಷಗಳ ವಕ್ತಾರರು ಬಹಿಷ್ಕರಿಸಬೇಕು ಎಂಬ ಆಗ್ರಹಗಳೂ ಕೇಳಿ ಬಂದಿವೆ. 

ಟಿವಿಯಲ್ಲಿ ಬೈದಿದ್ದು ಸಾಲದು ಎಂದು ಮತ್ತೆ ವೈಯಕ್ತಿಕ ಕಾಲ್ ಮಾಡಿ ಅರ್ನಬ್ ತನ್ನ ಜೊತೆ ಅತ್ಯಂತ ಕೆಟ್ಟದಾಗಿ ಮಾತನಾಡಿ ಬೆದರಿಕೆ ಹಾಕಿದ್ದಾರೆ ಎಂದು ಬೃಜೇಶ್ ಹೇಳಿದ್ದಾರೆ. " ತನ್ನ ವಿರುದ್ಧ ಬೇಕಾದಷ್ಟು ' ಡರ್ಟಿ ಡೀಲಿಂಗ್ ' ಗಳ ವಿವರ ಇದೆ ಎಂದು ಹೇಳಿದ್ದಾರೆ. ಅಂತಹ ವಿವರಗಳಿದ್ದರೆ ಅವುಗಳನ್ನು ಬಹಿರಂಗಪಡಿಸಲಿ. ನನಗೂ ಅವುಗಳನ್ನು ತಿಳಿಯಬೇಕಿದೆ. ಅರ್ನಬ್ ಬೀದಿ ಜಗಳದ ಮಟ್ಟಕ್ಕೆ ಇಳಿದು ಗೆದ್ದಿದ್ದಾರೆ. ನಾನು ಆ ಮಟ್ಟಕ್ಕೆ ಇಳಿಯಲಾರೆ, ಹಾಗಾಗಿ ನಾನು ಅವರ ಜೊತೆ ಜಗಳಕ್ಕೆ ಇಳಿಯುವುದಿಲ್ಲ " ಎಂದು ಬೃಜೇಶ್ ತಿರುಗೇಟು ನೀಡಿದ್ದಾರೆ. 

Full View

Full View

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News