ಪಠ್ಯಪುಸ್ತಕದಲ್ಲಿಯ ವಿವಾದಿತ ನಕಾಶೆ ಬದಲಿಸಲು ಎನ್‌ಸಿಇಆರ್‌ಟಿ ನಿರ್ಧಾರ
ಹೊಸದಿಲ್ಲಿ,ಮೇ 13: ಅಕ್ಸಾಯಿ ಚಿನ್ ಅನ್ನು ವಿವಾದಿತ ಪ್ರದೇಶವೆಂದು ತೋರಿಸಿರುವ 12ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಲ್ಲಿಯ ಪೂರ್ವ ಮತ್ತು ಆಗ್ನೇಯ ಏಷ್ಯಾ ನಕಾಶೆಯನ್ನು ಬದಲಿಸಲು ಎನ್‌ಸಿಇಆರ್‌ಟಿ ನಿರ್ಧರಿಸಿದೆ.
ಅಕ್ಸಾಯಿ ಚಿನ್ ಅನ್ನು ವಿವಾದಿತ ಪ್ರದೇಶವೆಂದು ತೋರಿಸಿರುವುದನ್ನು ಆಕ್ಷೇಪಿಸಿ ಹಲವಾರು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಎನ್‌ಸಿಇಆರ್‌ಟಿ ಈ ಕ್ರಮಕ್ಕೆ ಮುಂದಾಗಿದೆ. ‘ಕಂಟೆಂಪರರಿ ವರ್ಲ್ಡ್ ಪಾಲಿಟಿಕ್ಸ್ ’ಶೀರ್ಷಿಕೆಯ ಈ ಪುಸ್ತಕವು 2007ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿದ್ದು, ನಂತರದ ವರ್ಷಗಳಲ್ಲಿ ಮರುಮುದ್ರಣಗೊಂಡಿದೆಯೇ ಹೊರತು ಪರಿಷ್ಕರಿಸಲಾಗಿಲ್ಲ.
ಟೆಕ್ಸಾಸ್ ವಿವಿ ಈ ನಕಾಶೆಯನ್ನು ಸಿದ್ಧಪಡಿಸಿದ್ದು,ಗಡಿಯನ್ನು ಅದು ದೃಢಪಡಿಸಿರಲಿಲ್ಲ ಎಂದು ಎನ್‌ಸಿಇಆರ್‌ಟಿ ಹೇಳಿದೆ.
1962ರ ಭಾರತ-ಚೀನಾ ಯುದ್ಧದ ಬಳಿಕ ಅತಿಕ್ರಮಿತ ಅರುಣಾಚಲ ಪ್ರದೇಶದಿಂದ ಚೀನಾ ಹಿಂದಕ್ಕೆ ಸರಿದಿತ್ತಾದರೂ ಅಕ್ಸಾಯಿ ಚಿನ್ ಅನ್ನು ಮಾತ್ರ ತೆರವುಗೊಳಿಸಿಲ್ಲ. ಪಠ್ಯಪುಸ್ತಕದ 56ನೇ ಪುಟದಲ್ಲಿರುವ ನಕಾಶೆಯಲ್ಲಿ ಅಕ್ಸಾಯಿ ಚಿನ್ ಬಳಿ ಭಾರತ-ಚೀನಾ ಗಡಿಯನ್ನು ವಿವಾದಿತ ಸ್ಥಳವೆಂದು ಸೂಚಿಸಲು ಬಿಂದುಗಳ ರೇಖೆಯಿಂದ ಗುರುತಿಸ ಲಾಗಿದೆ. ಈ ಪ್ರದೇಶದ ಮೇಲೆ ಭಾರತದ ಹಕ್ಕು ಮಂಡನೆಯನ್ನೂ ಉಲ್ಲೇಖಿಸಲಾಗಿದೆ.
ಇದೇ ಪುಸ್ತಕದ 149ನೇ ಪುಟದಲ್ಲಿ ಮುದ್ರಿಸಲಾಗಿರುವ ಭಾರತ ಮತ್ತು ಅದರ ನೆರೆರಾಷ್ಟ್ರಗಳ ನಕಾಶೆಯಲ್ಲಿ ಅಕ್ಸಾಯಿ ಚಿನ್ ಅನ್ನು ಭಾರತದ ಅಖಂಡ ಭಾಗವಾಗಿ ತೋರಿಸಲಾಗಿದೆ. ಆದರೂ ಪುನರ್ಮುದ್ರಣ ಆವೃತ್ತಿಯಲ್ಲಿ ಪುಟ 56ರಲ್ಲಿಯ ನಕಾಶೆಯ ಬದಲಿಗೆ ಆಗ್ನೇಯ ಏಷ್ಯಾದ ನಕಾಶೆಯನ್ನು ಸೇರಿಸಲಾಗುವುದು ಎಂದು ಎನ್‌ಸಿಇಆರ್‌ಟಿ ತಿಳಿಸಿದೆ.