ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ
ಉತ್ತರ ಪ್ರದೇಶ, ಮೇ 13: ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ತನ್ನ ಮಗಳನ್ನು ತಂದೆಯೇ ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ.
ತನ್ನ ಊರಿನವನೇ ಆದ ಯುವಕನನ್ನು ಮಗಳು ಪ್ರೀತಿಸುತ್ತಿರುವ ವಿಚಾರ ತಿಳಿದು ಕೋಪಗೊಂಡ ತಂದೆಯು ಮಗನೊಂದಿಗೆ ಸೇರಿ ಮಗಳನ್ನೇ ಕೊಂದಿದ್ದಾನೆ. ಯುವತಿ ಸಾವನ್ನಪ್ಪುವ ಮುನ್ನ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದು, ಅಸೊಮೊಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಭಾಲ್ ಜಿಲ್ಲೆಯ ರೂಬಿ ಎಂಬಾಕೆ ಅದೇ ಊರಿನ ಇಬ್ರಾಹೀಂ ಎಂಬಾತನನ್ನು ಪ್ರೀತಿಸುತ್ತಿದ್ದಳು. ರೂಬಿ ಫೋನ್ ನಲ್ಲಿ ಯುವಕನೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಿದ ಆಕೆಯ ಸಹೋದರಿ ಈ ಬಗ್ಗೆ ತಂದೆಗೆ ಹೇಳಿದ್ದಾಳೆ. ಇದರಿಂದ ಕೋಪಗೊಂಡ ತಂದೆ ಸಮ್ರಾಜರ್ ಹಾಗೂ ಸಹೋದರ ಇಫ್ತಿಕಾರ್ ಆಕೆಗೆ ಥಳಿಸಿದ್ದಾರೆ. ತದನಂತರ ಯುವತಿ ಮಲಗಿದ್ದ ವೇಳೆ ತಂದೆ ಮತ್ತು ಪುತ್ರ ಸೇರಿ ಆಕೆಗೆ ಗುಂಡಿಕ್ಕಿದ್ದಾರೆ.
ಗುಂಡಿನ ಶಬ್ಧ ಕೇಳಿ ಗ್ರಾಮಸ್ಥರು ಮನೆ ಮುಂದೆ ಜಮಾಯಿಸಿದ್ದು, ಇದರಿಂದ ಹೆದರಿದ ಇಬ್ಬರೂ ಪರಾರಿಯಾಗಿದ್ದಾರೆ. ಡಿಎಸ್ ಪಿ ಬಿ.ಪಿ.ಬಾಲ್ಯನ್ ಹಾಗೂ ತಹಶೀಲ್ದಾರ್ ನಿತಿನ್ ತನೇಜಾ ಸ್ಥಳಕ್ಕೆ ಧಾವಿಸಿದ್ದು, ಯುವತಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ.